ಉಡುಪಿ: ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ ಇದರ ಬೆಳ್ಳಿ ಬೆಡಗು ಕಾರ್ಯಕ್ರಮ ಪ್ರಯುಕ್ತ ಶ್ರೀ ದುರ್ಗಾ ಸಹಕಾರ ಸೌಧ ಲೋಕಾರ್ಪಣೆ ಕಾರ್ಯಕ್ರಮವು ಅ.12ರಂದು ಬೆಳಗ್ಗೆ 10.30ಗಂಟೆಗೆ ಪರ್ಕಳದಲ್ಲಿ ನಡೆಯಲಿದೆ.
2001 ಜೂನ್ 27ರಂದು ಪರ್ಕಳ ಬಸ್ ನಿಲ್ದಾಣದ ಬಳಿಯ 150 ಚ.ಅ. ಅಂಗಡಿಕೋಣೆಯಲ್ಲಿ ಪ್ರಾರಂಭಿಸಿದ ಸಂಘ ಮಣಿಪಾಲದ ರೂವಾರಿಗಳಲ್ಲಿ ಪ್ರಮುಖರಾದ ದಿ | ಕೆ.ಕೆ. ಪೈ ಮತ್ತು ಪರ್ಕಳದ ಖ್ಯಾತ ವೈದ್ಯರಾದ ಡಾ| ಗಿರಿಧರ್ ರಾವ್ ಅವರಿಂದ ಉದ್ಘಾಟಿಸಲ್ಪಟ್ಟು ಪ್ರಥಮ ದಿವಸ ರೂ 3ಲಕ್ಷ ಠೇವಣಿಯೊಂದಿಗೆ ಸೇವೆ ಆರಂಭಿಸಿತು. ಸ್ಥಾಪನೆಗೊಂಡು ಎರಡನೇ ವರ್ಷದಲ್ಲಿ ಲಾಭ ಗಳಿಸಿ ಸದಸ್ಯರಿಗೆ ಪಾಲುಮುನಾಫೆ ನೀಡಲು ಆರಂಭಿಸಿತು. ನಿರಂತರ ಅಭಿವೃದ್ಧಿ, ಅತ್ಯುತ್ತಮ ಪ್ರಗತಿಯೊಂದಿಗೆ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸಿ ಸಂಸ್ಥೆ ಸಹಕಾರಿ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 2021ರಿಂದ ಅಶೋಕ್ ಕಾಮತ್ ಕೊಡಂಗೆ ಅಧ್ಯಕ್ಷರಾಗಿ, ಪಾಂಡುರಂಗ ಕಾಮತ್ ಪರ್ಕಳ ಉಪಾಧ್ಯಕ್ಷರಾಗಿ ಸಂಸ್ಥೆಯನ್ನು ಮುತುವರ್ಜಿಯಿಂದ ಮುನ್ನಡೆಸುತ್ತಿದ್ದು ಆಡಳಿತದಲ್ಲಿ ನಿರ್ದೇಶಕ ಮಂಡಳಿಯ ಸ್ಪಂದನೆಯಿಂದ ಸಂಸ್ಥೆ ಚುರುಕನ್ನು ಕಂಡುಕೊಂಡು 2024 -25ರ ವರ್ಷಾಂತ್ಯಕ್ಕೆ ಸಂಘದ ಠೇವಣಿ ರೂ.141 ಕೋಟಿ, ಸ್ವಂತ ನಿಧಿಗಳು ರೂ 16.50 ಕೋಟಿ, ರೂ 2.91 ಕೋಟಿ ಮಿಕ್ಕಿ ಲಾಭಗಳಿಸಿ ಶೇ.15% ಡಿವಿಡೆಂಡ್ ವಿತರಿಸಿತು. ಅಲ್ಲದೆ ಕಳೆದ 18 ವರ್ಷದಿಂದ ಲೆಕ್ಕ ಪರಿಶೋಧನೆಯ ಏ ಸಹಕಾರಿ ಸಂಘ ಎಂದು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವೊಚಾರ,
ಸ್ವಂತ ಕಟ್ಟಡ ನಿಧಿಯಿಂದಲೇ ಕಟ್ಟಡ
ಸ್ವಂತ ಕಟ್ಟಡ ನಿಧಿಯಿಂದಲೇ ನಿರ್ಮಿಸಿದ ಶ್ರೀ ದುರ್ಗಾ ಸಹಕಾರ ಸೌಧ ಲೋಕಾರ್ಪಣೆ ಅ.12ರಂದು ನಡೆಯಲಿದೆ. ಸುಮಾರು 16000 ಚ.ಅ. ವಿಸ್ತೀರ್ಣದ ಕಟ್ಟಡದಲ್ಲಿ ತಳ ಅಂತಸ್ತು ಪಾರ್ಕಿಂಗ್, ನೆಲ ಅಂತಸ್ತು ಹವಾನಿಯಂತ್ರಿತ ಸಂಘದ ಪ್ರಧಾನ ಕಚೇರಿ, ಪ್ರಥಮ ಮತ್ತು ದ್ವಿತೀಯ ಮಹಡಿ ಬಾಡಿಗೆಗೆ ಹಾಗೂ ಮೂರನೇ ಮಹಡಿ ಸುಂದರವಾದ ಹವಾ ನಿಯಂತ್ರಿತ ಸಭಾಂಗಣ ಹೊಂದಿದೆ.