ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕಂಪ್ಯೂಟರ್ ಡಿಟಿಪಿ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ. ರಮೇಶ್ ಗಾಣಿಗ, ಅಧ್ಯಕ್ಷರು, ಪತ್ರಕರ್ತರ ಸಂಘ, ಬ್ರಹ್ಮಾವರ, ಪತ್ರಕರ್ತರು ಉದಯವಾಣಿ ದಿನಪತ್ರಿಕೆ.
ಅವರು ಕಂಪ್ಯೂಟರ್ ಡಿಟಿಪಿ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತರಬೇತಿಯನ್ನು ಬಹಳ ಉತ್ತಮವಾಗಿ ಪಡೆದುಕೊಂಡಿದ್ದೀರಿ, ಕಂಪ್ಯೂಟರ್ ಕೌಶಲ್ಯವನ್ನು ತಳಮಟ್ಟದಿಂದ ಪಡೆದುಕೊಂಡಿರುವಂಥದ್ದು ಬಹಳ ಮುಖ್ಯ ಹಾಗೂ ಅದನ್ನು ಸಂಪೂರ್ಣವಾಗಿ ಅರ್ಥಿಸಿಕೊಂಡಿದ್ದೀರಿ. ಇನ್ನು ಮುಂದಕ್ಕೆ ಕಂಪ್ಯೂಟರ್ ಡಿಸೈನ್ ಕುರಿತಾಗಿ ಹೆಚ್ಚಿನ ಮಟ್ಟದ ಮಾಹಿತಿಯನ್ನು ಬಹಳ ಸುಲಭವಾಗಿ ಅರ್ಥೈಸಿಕೊಳ್ಳಲು ಹಾಗೂ ಆ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಜೊತೆಗೆ ನಮಗೆ ತಿಳಿದಿರುವ ಕೌಶಲ್ಯವನ್ನು ನವೀಕರಿಸಿಕೊಂಡು ಬೇರೆ ಬೇರೆ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾರುಕಟ್ಟೆಗೆ ವಿಸ್ತರಿಸಲು ಪ್ರಯತಿಸಬೇಕು, ಆಗ ಮಾತ್ರವೇ ನಾವು ಉದ್ಯಮದಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಾಧ್ಯ. ಅಲ್ಲದೇ ಹೆಚ್ಚು ಕಾಲ ಉದ್ಯಮದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಜೊತೆಗೆ ನಾವೆಲ್ಲರೂ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವಲ್ಲಿ ಗಮನ ಹರಿಸಬೇಕು, ಏಕೆಂದರೆ ದಿನೇ ದಿನೇ ಹೊಸ ಹೊಸ ವಿಚಾರಗಳು ಮಾರುಕಟ್ಟೆಗೆ ಬರುತ್ತಿರುತ್ತವೆ, ಅದಕ್ಕೆ ಅನುಗುಣವಾಗಿ ನಾವು ಅಣಿಯಾಗುತ್ತಿರಬೇಕು. ಜೊತೆಗೆ ಉತ್ತಮ ನಾಗರಿಕರಾಗಬೇಕೆಂದರೆ ಪುಸ್ತಕ ಓದುವ ಹವ್ಯಾಸವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಯಾವ ರೀತಿ ಉತ್ತಮವಾಗಿ ಜೀವನ ಮಾಡಬೇಕು, ಉದ್ಯಮ ನಡೆಸಬೇಕು ಎಂಬುದರ ವ್ಯಕ್ತಿತ್ವ ವಿಕಸನ ಮೌಲ್ಯಗಳು ಪುಸ್ತಕದಿಂದ ದೊರೆಯುತ್ತದೆ. ವ್ಯಕ್ತಿತ್ವ ವಿಕಸನದಿಂದ ಗುರಿಮುಟ್ಟುವುದು ಸುಲಭವಾಗುತ್ತದೆ, ಜೊತೆಗೆ ಉದ್ಯಮ ನಡೆಸಲು ಬೇಕಾಗುವಂತಹ ಹಲವಾರು ಸಬ್ಸಿಡಿ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ, ಶುಭ ಹಾರೈಸಿದರು.
ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕಾರದ ಶ್ರೀ. ಸಂತೋಷ್ ಶೆಟ್ಟಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ತರಬೇತಿಯನ್ನು ಪಡೆದು, ಹೊಸ ಮುಖ ಪ್ರತಿಭೆಗಳಾಗಿ ಹೊರಹೋಗುತ್ತಿದ್ದೀರಿ. 45 ದಿನದ ತರಬೇತಿಯು ಪರಿಪೂರ್ಣವಾಗಬೇಕಾದರೆ ನೀವು ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು. ಹಾಗಾಗಿ ಹೆಚ್ಚಿನ ಸಮಯವನ್ನು ವ್ಯಯ ಮಾಡದೆ, ಕಡಿಮೆ ಬಂಡವಾಳದಲ್ಲಿ ಸಣ್ಣದಾಗಿ ಉದ್ಯಮವನ್ನು ಪ್ರಾರಂಭಿಸಿ, ಅಡೆತಡೆಗಳು ಬೇರೆ ಬೇರೆ ರೀತಿಯಲ್ಲಿ ಬರಬಹುದು, ಯಾವುದಕ್ಕೂ ಕುಗ್ಗದೆ, ಆತ್ಮಸ್ಥೈರ್ಯದಿಂದ ಹಿಡಿದ ಕೆಲಸವನ್ನು ಪೂರ್ಣ ಮಾಡಿ. ಸದಾ ನಿಮ್ಮ ಜೊತೆಗೆ, ಬೆಂಬಲವಾಗಿರುತ್ತೇವೆ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಸರೆ ಸಂಘಟನೆಯ ಅಧ್ಯಕ್ಷರು, ಹರಿಣಿ ಅಜಯ್ ರಾವ್, . ರಾಜೇಶ್ ದೇವಾಡಿಗ, ಮಾಲಕರು ಅವಿರಾಗ್ ಸ್ಟುಡಿಯೋ, ಬ್ರಹ್ಮಾವರ,. ಕುಶ, ಮಾಲಕರು, ಲಕ್ಷ್ಮಣ್ ಜ್ಯುವೆಲ್ಲರಿ, ಕೋಟ, ವೆಂಕಟೇಶ್ ನಾಯ್ಕ, ಮಾಲಕರು, ರಾಧಾಕೃಷ್ಣ ಕಂಪ್ಯೂಟರ್ಸ , ಕೆಮ್ಮಣ್ಣು. ಉಪನ್ಯಾಸಕಿ ಚೈತ್ರ . ಕೆ ಕಾರ್ಯಕ್ರಮವನ್ನು ನಿರೂಪಿಸಿ, ಕಛೇರಿ ಸಹಾಯಕರಾದ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಛೇರಿ ಸಹಾಯಕರಾದ ರವಿ ವಂದಿಸಿದರು.

