ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ

0
17

ಮಂಗಳೂರು: ಭಾರತದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಲಾಗಿದೆ. ವರದಿಗಳ ಪ್ರಕಾರ, ಪ್ರೀಮಿಯಮ್ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 2.30 ರೂನಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕವಾಗಿ ತೈಲ ಸರಬರಾಜು ವ್ಯತ್ಯಯಗೊಂಡಿರುವ ಪರಿಣಾಮ ಈ ಏರಿಕೆ ಆಗಿರಬಹುದು. ಆದರೆ, ಅಧಿಕೃತವಾಗಿ ಯಾವ ಕಾರಣವನ್ನೂ ಕೊಡಲಾಗಿಲ್ಲ. ಆದರೆ, ಮಾಮೂಲಿಯ ಅನ್​ಲೆಡೆಡ್ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಡೀಸಲ್ ಬೆಲೆಯಲ್ಲೂ ಏರಿಕೆ ಆಗಿಲ್ಲ.

ಪ್ರೀಮಿಯಮ್ ಪೆಟ್ರೋಲ್ ಹೈ ಆಕ್ಟೇನ್ ಪೆಟ್ರೋಲ್ ಆಗಿದೆ. ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸಿ, ಮೈಲೇಜನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಬೆಲೆ ಮಾಮೂಲಿಯ ಪೆಟ್ರೋಲ್​ಗಿಂತ ತುಸು ಹೆಚ್ಚಿನದ್ದಿರುತ್ತದೆ. ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್​ಪಿಸಿಎಲ್ ಈ ಬೆಲೆ ಏರಿಕೆ ಮಾಡಿವೆ.

ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಬೆಲೆಗಳು ಬ್ಯಾರಲ್​ಗೆ 65 ಡಾಲರ್ ಇದ್ದದ್ದು 100 ಡಾಲರ್ ಗಡಿ ದಾಟಿವೆ. ಕಚ್ಛಾ ತೈಲ ಬೆಲೆ ಏರಿಕೆಯಾದರೆ ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬೇಕಿತ್ತು. ಆದರೆ, ಸರ್ಕಾರವು ಜನಸಾಮಾನ್ಯರು ಮತ್ತು ಉದ್ಯಮಗಳಿಗೆ ಹೊರೆಯಾಗದಿರಲಿ ಎಂದು ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದಿರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ನಿಬಂಧನೆ ಹಾಕಿದೆ.

ಇದರ ಹೊರೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳ ಮೇಲೆ ಬಿದ್ದಿದೆ. ಕಚ್ಛಾ ತೈಲ ಬೆಲೆಯಲ್ಲಿ 10 ಡಾಲರ್ ಏರಿಕೆಯಾದಂತೆ ಪೆಟ್ರೋಲ್ ಲಾಭದಲ್ಲಿ 6.3 ರೂ ಕುಸಿತ ಆಗುತ್ತದೆ ಎನ್ನುವ ಲೆಕ್ಕಾಚಾರ ಇದೆ.

LEAVE A REPLY

Please enter your comment!
Please enter your name here