ಉಡುಪಿ: ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಶ್ರೀಕೃಷ್ಣನ ಬಾಲಲೀಲೆಗಳನ್ನು ತೋರಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆಯಾಗಿದೆ.
ಸೆ.14ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ ನಡೆಯುತ್ತಿದ್ದು, ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳ ನಿರ್ಮಾಣ ಪ್ರಕ್ರಿಯೆ ಈಗಾಗಲೇ ಸಂಪೂರ್ಣಗೊಂಡಿದೆ.
ಮಠ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಅಷ್ಟಮಠಕ್ಕೆ ಸಂಬಂಧಿಸಿದ 8, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 3 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ರಚಿಸಲಾಗಿದೆ. ಪ್ರತಿ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ – ಕುಂಕುಮದ ನೀರು ತುಂಬಿಸಲಾಗುತ್ತದೆ. ಒಟ್ಟು 47 ಮಣ್ಣಿನ ಕುಡಿಕೆಗಳಿಗೆ ಕಲಾತ್ಮಕವಾಗಿ ಬಣ್ಣ ಬಳಿಯಲಾಗಿದೆ.
ಸೆ.14ರಂದು ಬೆಳಗ್ಗೆ 9.30ರಿಂದ ರಾಜಾಂಗಣ, ಮಧ್ವಮಂಟಪ, ಅನ್ನಬ್ರಹ್ಮ ಮೊದಲಾದಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 5ಕ್ಕೆ ರಾಜಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ನಡೆಯಲಿದೆ.