ಉಡುಪಿಗೆ ಪ್ರಧಾನಿ ನರೇಂದ್ರ ಮೋದಿಯವರು ನ.28ರಂದು ಶ್ರೀ ಕೃಷ್ಣಮಠಕ್ಕೆ ಆಗಮಿಸಲಿರುವುದರಿಂದ ಭದ್ರತೆ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ದೃಷ್ಟಿಯಿಂದ ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜನ ಪ್ರತಿನಿಧಿಗಳು ಸಭೆ ನಡೆಸಿದ್ದಾರೆ. ಇದೀಗ ಪ್ರಧಾನಿಯವರ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅನುಕೂಲ ಆಗುವಂತೆ ಆದಿ ಉಡುಪಿಯಲ್ಲಿ ಹೊಸ ಹೆಲಿಪ್ಯಾಡ್ ನಿರ್ಮಾಣ ಚಿಂತನೆ ಆರಂಭಗೊಂಡಿದೆ.
ಆದಿ ಉಡುಪಿಯಲ್ಲಿ ಈಗಾಗಲೇ ಮೂರು ಹೆಲಿಪ್ಯಾಡ್‌ಗಳಿವೆ. ಅದರಲ್ಲಿ ಒಂದು ಸಂಪೂರ್ಣ ಹಾಳಾಗಿದ್ದು ಹೆಲಿಕಾಪ್ಟರ್ ಲ್ಯಾಂಡಿಂಗ್ ಕಷ್ಟಸಾಧ್ಯವಾಗಿದೆ. ಇನ್ನು ಉಳಿದ ಎರಡು ಹೆಲಿಪ್ಯಾಡ್‌ಗಳಲ್ಲಿ ಒಂದು ಅಲ್ಲಿರುವ ಎನ್‌ಸಿಸಿ ಕಟ್ಟಡದ ಸಮೀಪವೇ ಇದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಪ್ರಧಾನಿಯವರ ಹೆಲಿಕಾಪ್ಟರ್ ಅದರಲ್ಲಿ ಲ್ಯಾಂಡಿಂಗ್ ಕಷ್ಟವಾಗಲಿದೆ. ಆದ್ದರಿಂದ ಹೊಸದಾಗಿ ಒಂದು ಹೆಲಿ ಪ್ಯಾಡ್ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.
ವೆಚ್ಚ ಎಷ್ಟು?
ಹೆಲಿಪ್ಯಾಡ್ ನಿರ್ಮಾಣಕ್ಕೆ 65-70 ಲಕ್ಷ ರೂ. ವೆಚ್ಚವಾಗಲಿದೆ. ನ. 28ಕ್ಕೆ ಪ್ರಧಾನಿ ಮೋದಿಯವರು ಆಗಮಿಸುವುದರಿಂದ ಅದಕ್ಕಿಂತ ಕೆಲವು ದಿನಗಳ ಮೊದಲೇ ಕಾಮಗಾರಿ ಪೂರ್ಣಗೊಂಡಿರಬೇಕು. ಲೋಕೋಪಯೋಗಿ ಇಲಾಖೆಯ ಮೂಲಕವೇ ಇದರ ನಿರ್ಮಾಣ ಮಾಡಬೇಕಾಗುತ್ತದೆ. ಜಿಲ್ಲಾಡಳಿತವೇ ಇದಕ್ಕೆ ಅನುದಾನ ಹೊಂದಿಸಬೇಕಾಗಿದೆ.
ಕಾರ್ಯಾದೇಶ ನೀಡಿಲ್ಲ
ಹೊಸ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಿಲ್ಲಾಡಳಿತ ಇತ್ತೀಚಿಗೆ ನಡೆದ ಸಭೆಯಲ್ಲಿ ನಿರ್ಧಾರ ಮಾಡಿದೆಯಾದರೂ ಈ ಬಗ್ಗೆ ಕಾರ್ಯಾದೇಶವನ್ನು ಇಲಾಖೆಗೆ ನೀಡಿಲ್ಲ. ಕಾರಣ, ಪ್ರಧಾನಿ ಮೋದಿಯವರ ಕಾರ್ಯಕ್ರಮದ ಅಧಿಕೃತತೆ ಇನ್ನೂ ಜಿಲ್ಲಾಡಳಿತಕ್ಕೆ ಬಂದಿಲ್ಲ. ಜಿಲ್ಲಾಡಳಿತಕ್ಕೆ ಒಮೆ¬¾ ಕನ್ಫರ್ಮೆಷನ್ ಸಿಗುತ್ತಿದ್ದಂತೆ ಕಾರ್ಯಾದೇಶ ನೀಡಲಾಗುತ್ತದೆ ಮತ್ತು ಇದರ ಜತೆಗೆ ಇನ್ನುಳಿದ ಅಗತ್ಯ ಕಾಮಗಾರಿಗಳು ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಸ್ತೆಯೂ ಆಗಬೇಕು
ಮಲ್ಪೆ-ಆದಿಉಡುಪಿ ರಸ್ತೆ ಅಗಲಿಕರಣ ಆಗುತ್ತಿರುವುದರಿಂದ ಕರಾವಳಿ ಬೈಪಾಸ್‌ನಿಂದ ಆದಿಉಡುಪಿ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ. ಆದಿಉಡುಪಿ ಹೆಲಿಪ್ಯಾಡ್ ಸಂಪರ್ಕ ರಸ್ತೆಯೂ ಹಾಳಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರು ಬರುವ ಹಿನ್ನೆಲೆಯಲ್ಲಿ ಈ ರಸ್ತೆಗಳೂ ಕಾಂಕ್ರೀಟ್ ಆಗಬೇಕಿದೆ.
ಆದಿ ಉಡುಪಿಯಲ್ಲಿ ಹೊಸ ಹೆಲಿಪ್ಯಾಡ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ. ಆದರೆ ಪ್ರಧಾನಿ ಮೋದಿಯವರ ಆಗಮನದ ವಿವರ ಇನ್ನೂ ಜಿಲ್ಲಾಡಳಿತಕ್ಕೆ ಬಂದಿಲ್ಲ. ಹೀಗಾಗಿ ಇನ್ನೂ ಕಾಮಗಾರಿಗೆ ಆದೇಶ ನೀಡಿಲ್ಲ. ಒಮ್ಮೆ ಅಧಿಕೃತ ಮಾಹಿತಿ ಬಂದ ಕೂಡಲೇ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗುವುದು.
- ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ ಉಡುಪಿ
ಹೆಲಿಪ್ಯಾಡ್ ಪರಿಶೀಲನೆ
ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿ ಹೆಲಿಪ್ಯಾಡ್ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಯಶಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆದಿಉಡುಪಿಯಲ್ಲಿ ಪ್ರಸ್ತುತ ಇರುವ 3 ಹೆಲಿಪ್ಯಾಡ್ ಗಳನ್ನು ನವೀಕರಿಸುವ ಜತೆಗೆ ಹೆಚ್ಚುವರಿಯಾಗಿ ಒಂದು ನೂತನ ಹೆಲಿಪ್ಯಾಡ್ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದ್ದು, ತತ್‌ಕ್ಷಣ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ನಗರಸಭೆ ವತಿಯಿಂದ ಹೆಲಿಪ್ಯಾಡ್ ಪ್ರದೇಶದಲ್ಲಿ ಹುಲ್ಲುಗಳನ್ನು ತೆರವುಗೊಳಿಸಿ ಸ್ವಚ್ಚತೆ ಕಾರ್ಯ ನಡೆಯುತ್ತಿದೆ. ಹೆಲಿಪ್ಯಾಡ್ ಸಂಪರ್ಕಿಸುವ ರಸ್ತೆಗಳ ರಿಪೇರಿಗೆ ಕ್ರಮ ವಹಿಸಲಾಗಿದ್ದು, ಹೆಲಿಪ್ಯಾಡ್ ಪ್ರದೇಶಕ್ಕೆ ಶೀಘ್ರದಲ್ಲಿ ಸುಸಜ್ಜಿತ ಗೇಟ್ ಅಳವಡಿಕೆ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಆದಿಉಡುಪಿ ಕರಾವಳಿ ಜಂಕ್ಷನ್ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ವಿಶೇಷ ಆದ್ಯತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ
ಸಹಾಯಕ ಎಂಜಿನಿಯರ್‌ಗೆ ತಿಳಿಸಿದರು.
ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಸುಂದರ ಕಲ್ಮಾಡಿ, ಶ್ರೀಶ ಭಟ್, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್‌ಬೈಲೂರು, ಪ್ರಮುಖರಾದ ಹರೀಶ್ ರಾಮ್, ದಿನೇಶ್ ಅಮೀನ್, ಅಕ್ಷಿತ್ ಶೆಟ್ಟಿ ಹೆರ್ಗ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಲಾಯ್ಡ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಎಂಜಿನಿಯರ್‌ಮಂಜುನಾಥ ನಾಯಕ್ ಉಪಸ್ಥಿತರಿದ್ದರು.

