ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳು ಆರ್ಥಿಕ ವರ್ಷದಲ್ಲಿ ಆರ್.ಬಿ.ಐ ಮಾರ್ಗಸೂಚಿ ಅನ್ವಯ ನೀಡಿರುವ ಗುರಿಗಳನ್ನು ಸಾಧಿಸಲು ಆದ್ಯತೆ ನೀಡಬೇಕೆಂದು ಆರ್.ಬಿ.ಐ ಎ.ಜಿ.ಎಂ. ನಿಶಾ ಠಾಕೂರ್ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಹೆಬ್ರಿ ತಾಲೂಕಿನಲ್ಲಿ ಬ್ಯಾಂಕ್ಗಳ ಶಾಖೆಗಳ ಸಂಖ್ಯೆ ಕಡಿಮೆ ಇದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬ್ಯಾಂಕ್ಗಳು ಕಾರ್ಯನಿರ್ವಹಿಸುವಂತೆ ಗಮನಹರಿಸಬೇಕು. ಬ್ಯಾಂಕಿನಿಂದ ದೊರೆಯುವ ಸಾಲ, ಸಹಾಯಧನ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ ಬ್ಯಾಂಕಿಂಗ್ ವ್ಯವಹಾರದ ವಿಸ್ತರಣೆಗೆ ಮುಂದಾಗಬೇಕು ಎಂದರು.
ಬ್ಯಾಂಕಿಂಗ್ ಸಾಲ ಮತ್ತು ಠೇವಣಿ ಅನುಪಾತವು ಕಳೆದ ಬಾರಿ ಶೇ.48.47 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.49.54 ರಷ್ಟು ಹೆಚ್ಚಾಳವಾಗಿದ್ದು, ಶೇ. 1.07ರಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಿ.ಡಿ ಅನುಪಾತವನ್ನು ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.
ಕೆನರಾ ಬ್ಯಾಂಕ್ ರೀಜನಲ್ ಮ್ಯಾನೇಜರ್ ಟಿ.ಎಸ್. ಪೂರ್ಣಾನಂದ್ ಮಾತನಾಡಿ, ಗ್ರಾಮಿಣ ಭಾಗದಲ್ಲಿ 239, ಸೆಮಿ ಅರ್ಬನ್ನಲ್ಲಿ 94 ಹಾಗೂ ನಗರ ಪ್ರದೇಶಗಳಲ್ಲಿ 106 ಸೇರಿದಂತೆ ಒಟ್ಟು 439 ಬ್ಯಾಂಕ್ ಶಾಖೆಗಳಿದ್ದು, ಒಟ್ಟಾರೆಯಾಗಿ 67,840 ಕೋಟಿ ರೂ. ಬ್ಯಾಂಕಿಂಗ್ ವ್ಯವಹಾರ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 9.96 ರಷ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಬೆಳವಣಿಗೆ ಸಾಧಿಸಲಾಗಿದೆ. ಬ್ಯಾಂಕ್ಗಳು 22,475 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ. ಈ ವರ್ಷ 15,514.16 ಕೋಟಿ ರೂ. ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈವರೆಗೆ 13,060.39 ಸಾಲ ನೀಡಲಾಗಿದೆ. ಕೃಷಿ ವಲಯಕ್ಕೆ 3429.03 ಕೋಟಿ ರೂ., ಎಂ.ಎಸ್.ಎಂ.ಇ ವಲಯಕ್ಕೆ 3040.98, ಶಿಕ್ಷಣ ವಲಯಕ್ಕೆ 153.21 ಕೋಟಿ ರೂ., ವಸತಿ ಕ್ಷೇತ್ರಗಳಿಗೆ 174.83 ಕೋಟಿ ರೂ., ಇತರೆ ಕ್ಷೇತ್ರಗಳಿಗೆ 246.82 ಕೋಟಿ ರೂ. ವಿತರಿಸಲಾಗಿದೆ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ. ಮಾತನಾಡಿ, ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 165 ಫಲಾನುಭವಿಗಳಿಗೆ 6.59 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ. ಪಿ.ಎಂ.ವಿಶ್ವಕರ್ಮ ಯೋಜನೆಯಡಿ 5865 ಅರ್ಜಿಗಳು ಸ್ವೀಕೃತವಾಗಿದ್ದು, 1345 ಅರ್ಜಿಗಳು ತಿರಸತಗೊಂಡಿವೆ. 4028 ಫಲಾನುಭವಿಗಳಿಗೆ 36.65 ಕೋಟಿ ರೂ. ಸಾಲ ವಿತರಿಸಲಾಗಿದೆ. ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 154 ಫಲಾನುಭವಿಗಳಿಗೆ 20.53 ಕೋಟಿ ರೂ. ಹಾಗೂ ಪಿ.ಎಂ.ಎಸ್.ಜಿ.ಎಂ.ಬಿ.ವೈ ಮೂಲಕ 444 ಫಲಾನುಭವಿಗಳಿಗೆ 9.05 ಕೋಟಿ ರೂ. ಆರ್ಥಿಕ ನೆರವನ್ನು ಮಂಜೂರು ಮಾಡಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರಾಜೇಶ್ ಶೆಟ್ಟಿ, ರುಡ್ಸೆಟ್ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮತ್ತಿತರರು ಉಪಸ್ಥಿತರಿದ್ದರು.

