ಸರ್ಕಾರಿ ಕನ್ನಡ ಶಾಲೆಗಳ ರಕ್ಷಣೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ರಾಜ್ಯ ಗೌರವ ಸಲಹೆಗಾರರಾಗಿ ಹಿರಿಯ ಶಿಕ್ಷಣ ತಜ್ಞ, ಪ್ರೊ. ಝೇವಿಯರ್ ಡಿಸೋಜಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಅಭಿಯಾನದ ರಾಜ್ಯ ಸಮಿತಿಯು ಇವರ ಸುದೀರ್ಘ ಅನುಭವವನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಪ್ರೊ. ಝೇವಿಯರ್ ಡಿಸೋಜಾ ಅವರು ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿರಿಮೆಯನ್ನು ಹೊಂದಿದ್ದಾರೆ.
ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಮಾತ್ರವಲ್ಲದೆ, ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರ ಇಂತಹ ಶೈಕ್ಷಣಿಕ ಕಾಳಜಿ ಮತ್ತು ಸಂಘಟನಾ ಚತುರತೆಯು ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಆಶಿಸಲಾಗಿದೆ. ಇವರ ಮಾರ್ಗದರ್ಶನದಲ್ಲಿ ರಾಜ್ಯದ ಕನ್ನಡ ಶಾಲೆಗಳ ಉಳಿವಿಗಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಅಭಿಯಾನವು ಸನ್ನದ್ಧವಾಗಿದೆ.
ಪ್ರೊ. ಝೇವಿಯರ್ ಅವರ ನೇಮಕಕ್ಕೆ ಅಭಿಯಾನದ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

