ಉಡುಪಿ: ಆರ್ ಟಿ ಓ ಲಕ್ಷ್ಮೀನಾರಾಯಣ ಪಿ ನಾಯಕ್ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿಯ ಕಿನ್ನಿಮುಲ್ಕಿ ಫ್ಲ್ಯಾಟ್ ನಲ್ಲಿ ಇರುವ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಲಕ್ಷ್ಮೀ ನಾರಾಯಣ ನಾಯಕ್ ಅವರ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮನೆಯಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಒಟ್ಟು 5 ತಂಡ ರಚಿಸಿ 5 ಕಡೆಗಳಲ್ಲಿ ದಾಳಿ ನಡೆಸಲಾಗಿರುತ್ತದೆ. ಪಡುಅಲೆವೂರಿನಲ್ಲಿರುವ ಅಧಿಕಾರಿಯ ಆಪ್ತ ರವಿ ಸೇರಿಗಾರ್‌ನ ಮನೆ ಮತ್ತು ಕಚೇರಿಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಎರಡು ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ
2 ಮನೆ & ವಿವಿಧ ಸರ್ವೆ ನಂಬರಗಳಲ್ಲಿ 3 ನಿವೇಶನ, ಚಿನ್ನ, ಬೆಳ್ಳಿ, ಗೃಹೋಪಯೋಗಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿರುವ ಹಣ ಸೇರಿ ಒಟ್ಟು 2,21,14,234 ಮೌಲ್ಯದ ಆಸ್ತಿ ಪಾಸ್ತಿಗಳು ಪತ್ತೆಯಾಗಿದೆ. ತನಿಖೆ ಮುಂದುವರೆದಿದ್ದು, ಆರೋಪಿತರ1 ಬ್ಯಾಂಕ್ ಲಾಕರ್, ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ.