ಸಮೃದ್ಧ ಭಾರತ, ಸಾಮರಸ್ಯ ಭಾರತ

0
30

ಭಾರತ ಬಹುಸಂಸ್ಕೃತಿಯ ನಾಡು. ಹಲವು ಜಾತಿ ಧರ್ಮಗಳಿಂದ ಕೂಡಿದ ಜನರು ಇಲ್ಲಿ ವಾಸಿಸುತ್ತಾರೆ. ಆದರೆ ಹೊಂದಿಕೊಂಡು ಬದುಕುತ್ತಾರೆ. ನಮ್ಮ ದೇಶದಲ್ಲಿ ಸಾವಿರ ಸಾವಿರ ವರ್ಷಗಳಿಂದ ನಡೆದು ಬಂದ ಜೀವನ ಪದ್ಧತಿ ಇದಾಗಿದೆ. ಜಾತಿ ಧರ್ಮಗಳನ್ನು ಮೀರಿ ಬದುಕುವ ಪರಂಪರೆಯನ್ನು ಬೆಳೆಸಿಕೊಂಡು ಬಂದವರು ನಾವು ಭಾರತೀಯರು.
ಪುರಾಣ ಕಾಲದಲ್ಲಿ ವ್ಯಕ್ತಿಯ ಆಸಕ್ತಿ ಆಧಾರದ ಮೇಲೆ ಕಲಿತ ವಿದ್ಯೆಯ ಆಧಾರದ ಮೇಲೆ ಅವನು ಉದ್ಯೋಗವನ್ನು ಮತ್ತು ತನ್ನ ಜೀವನ ಪದ್ಧತಿಯನ್ನು ರೂಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ದಿನ ಕಳೆದಂತೆ ಮಾನವನ ಸ್ವಾರ್ಥ ಭಾವನೆಯಿಂದ ಈ ಸುಂದರ ಸಾಮಾಜಿಕ ಭಾವನೆ ಭಾರತದಲ್ಲಿ ಬದಲಾವಣೆಯಾಗುತ್ತಾ ಬಂತು. ವರ್ಣಾಶ್ರಮ ಧರ್ಮವನ್ನು ಸಾಮಾಜಿಕ ಸಮಾನತೆಗಾಗಿ ಜಾರಿಗೆ ತಂದ ಭಾರತೀಯ ಸಮಾಜ ಮತ್ತೆ ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಾಗಿಸುವ ಹಂತಕ್ಕೆ ತಲುಪಿತು. ಜನರ ಸಂಕುಚಿತ ಸ್ವಾರ್ಥ ಮನೋಭಾವನೆಯಿಂದ ಇಂತಹ ಸ್ಥಿತಿ ನಿರ್ಮಾಣವಾಯಿತು. ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ಪರಂಪರೆಯನ್ನು ಹಾಡಿ ಹೊಗಳುವ ಜನರು ಪ್ರಸ್ತುತ ಸಮಾಜದಲ್ಲಿ ಜಾತಿ ಧರ್ಮ ಮೇಲು ಕೀಳು ಎಂಬ ಮನೋಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ಒಗ್ಗಟ್ಟಿನ ಬದಲು ಬಿಕ್ಕಟ್ಟನ್ನು ಉಂಟುಮಾಡುತ್ತಾ ಬಂದವು. ಈ ಸುಂದರ ದೇಶದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಸೌಹಾರ್ದತೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಬದುಕಿನಲ್ಲಿ ಸೌಹಾರ್ದತೆಯನ್ನು ಅಳವಡಿಸಿಕೊಳ್ಳವ ಅಗತ್ಯ ಇದೆ.

ಇವ ಯಾರವ.. ಇವ ಯಾರವ.. ಇವ ಯಾರವ.. ಎನ್ನದೆ ಇವ ನಮ್ಮ ಇವ ನಮ್ಮವ..
ಎಂಬ ನಡೆನುಡಿ ನಮ್ಮದಾಗಬೇಕೆಂದು 12ನೇ ಶತಮಾನದಲ್ಲಿ ವಚನಕಾರರು ಹೇಳುತ್ತಾರೆ.

ರಾಷ್ಟ್ರಕವಿ ಕುವೆಂಪು ಅವರು,

”ಓಬನ್ನಿ ಸೋದರರೇ ಬೇಗ ಬನ್ನಿ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ”

ಎಂಬ ಸಂದೇಶವನ್ನು ನೀಡುವ ಕವನದ ಮೂಲಕ ಸೌಹಾರ್ದತೆಯ ಪ್ರಾಮುಖ್ಯತೆಯನ್ನು ತಿಳಿಸಿರುತ್ತಾರೆ. ಕುಡಿಯುವ ನೀರಿಗಾಗಿ, ತಿನ್ನುವ ಅನ್ನಕ್ಕಾಗಿ, ಬದುಕುವ ಭೂಮಿಗಾಗಿ, ಜಾತಿ ಧರ್ಮದ ಕಾರಣಕ್ಕಾಗಿ ನಾವು ನಿರಂತರವಾಗಿ ಬಡಿದಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ವಸುದೈವ ಕುಟುಂಬಕಂ ಎಂಬ ವಿಶಾಲ ಮನಸ್ಸನ್ನು ಹೊಂದಿರುವ ಭಾರತೀಯರು ಜಗತ್ತಿನ ಜನರೆಲ್ಲರೂ ಸಹೋದರರು ಎಂಬ ಭಾವನೆಯನ್ನು, ಜಗತ್ತೇ ಒಂದು ಕುಟುಂಬ ಎಂಬ ಭಾವನೆಯನ್ನು ಹೊಂದಿದವರು ಭಾರತೀಯರು ಎಂದು ಮಹಾಕಾವ್ಯಗಳ ಕಾಲದಲ್ಲಿಯೇ ಜನಜನಿತವಾದ ವಿಚಾರ. ಇದನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ವಿಶ್ವದ ಜನರನ್ನೇ ಸಹೋದರರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳುವ ಮನಸ್ಸು ನಮ್ಮದಾಗಬೇಕು.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರು ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ ಎಂದು ಹೇಳುವುದರ ಮೂಲಕ ಸೌಹಾರ್ದತೆಯ ಪ್ರಾಮುಖ್ಯತೆಯನ್ನು ಹೊಂದಾಣಿಕೆಯ ಪ್ರಾಮುಖ್ಯತೆಯನ್ನು ತಮ್ಮ ಕವನ ಒಂದರಲ್ಲಿ ತಿಳಿಸಿರುತ್ತಾರೆ.

ಭಾರತೀಯರಾದ ನಾವು ಈ ಹೊಂದಾಣಿಕೆಯ ಗುಣಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಜಾತಿ ಬೇರೆಯಾದರೂ ಧರ್ಮ ಬೇರೆಯಾದರೂ ಭಾಷೆ ಬೇರೆಯಾದರು ನಾವೆಲ್ಲರೂ ಒಂದೇ ನಾವು ಭಾರತೀಯರು ಎಂಬ ಪ್ರಜ್ಞೆಯನ್ನು ಯುವ ಜನಾಂಗದಲ್ಲಿ ಬೆಳೆಸುವುದರ ಮೂಲಕ ಸುಂದರ ಸಮೃದ್ಧಭಾರತವನ್ನು, ಸಾಮರಸ್ಯ ಭಾರತವನ್ನು ನಿರ್ಮಿಸಲು ಸಾಧ್ಯ. ಕಾಮ, ಕ್ರೋಧ, ಮೋಹ,ಲೋಭ, ಮದ,ಮತ್ಸರಗಳಿಂದ ಕೂಡಿದ ಮಾನವನ ಮನಸ್ಸಿನಲ್ಲಿ ಇಂತಹ ಹೊಂದಾಣಿಕೆಯ ಸಾಮರಸ್ಯದ ಮಂತ್ರಗಳನ್ನು ಉಪದೇಶಿಸುವುದರ ಮೂಲಕ ಸಮೃದ್ಧ ಭಾರತವನ್ನು, ನೆಮ್ಮದಿಯ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದ ಬದುಕಿನಲ್ಲಿ ಜಾಗತಿಕ ಮಟ್ಟದಲ್ಲಿ ಭಾರತೀಯರ ನಡೆನುಡಿ ಸಂಸ್ಕೃತಿ ಆಚಾರ ವಿಚಾರಗಳು ಮಾದರಿಯಾಗಬೇಕು. ಆ ರೀತಿಯಲ್ಲಿ ನಾವು ಬದುಕುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.

ಉರಿಯುವ ಬೆಂಕಿ, ಹರಿಯುವ ನೀರು, ಬೀಸುವ ಗಾಳಿ, ಬದುಕುವ ಭೂಮಿ ಒಂದೇ ಇರುವಾಗ ನಮ್ಮಲ್ಲಿ ಯಾಕೆ ದ್ವೇಷ, ಅಸೂಯೆ? ಹೊಂದಾಣಿಕೆಯ ಬದುಕು ಭಾರತೀಯರಲ್ಲಿ ಹುಟ್ಟಿನಿಂದಲೇ ಬಂದ ಗುಣವಾಗಿರುತ್ತದೆ. ಅದನ್ನು ಮರೆತು ದ್ವೇಷದ ಬೆಂಕಿಯಲ್ಲಿ ಬದುಕುವ ಸ್ಥಿತಿಯನ್ನು ನಾವು ನಿರ್ಮಾಣ ಮಾಡಿ ಕೊಂಡಿದ್ದೇವೆ. ಇನ್ನಾದರೂ ನಾವು ಬದಲಾಗಬೇಕಾದ ಅಗತ್ಯವಿದೆ. ಸೌಹಾರ್ದತೆಯಿಂದ, ಸಾಮರಸ್ಯದಿಂದ ಬದುಕುವ ಅನಿವಾರ್ಯತೆ ಇದೆ. ಆಗ ಮಾತ್ರ ಸುಂದರವಾದ ಸಮೃದ್ಧವಾದ ಭಾರತವನ್ನು ಜಗತ್ತು ಒಪ್ಪಿಕೊಳ್ಳುತ್ತದೆ. ಶ್ರೇಷ್ಠ ಭಾರತ ನಿರ್ಮಾಣವಾಗುತ್ತದೆ. ಮಣ್ಣ ಕಣಕಣದಲ್ಲೂ ತಂಪುಗಳಿರಲಿ ಒಲವಿನೊ ರತೆಯು ಎಂದು ಬ ಕಸವುರಸವಾಗಿ ಬಾಳು ವಂದನವಾಗಿ ಸೋದರತೆ ಹೊಳೆಯಾಗಿ ಹರಿದು ಬರಲಿ
ಎಂಬ ಕವಿ ವಾಣಿಯನ್ನು ತಿಳಿಸುತ್ತಾ ನಮ್ಮ ಬದುಕಿನಲ್ಲಿ ಈ ಸದ್ಗುಣವನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮೃದ್ಧ ಭಾರತವನ್ನು, ಶಾಂತ ಭಾರತವನ್ನು, ಸಾಮರಸ್ಯದಿಂದ ಕೂಡಿದ ಭಾರತವನ್ನು ನಿರ್ಮಾಣ ಮಾಡೋಣ, ಜಗತ್ತಿಗೆ ಮಾದರಿಯಾಗೋಣ.

– ಡಾ. ರಾಮಕೃಷ್ಣ ಶಿರೂರು ಮೂಡುಬಿದಿರೆ
mo: 9482039080

LEAVE A REPLY

Please enter your comment!
Please enter your name here