ಮೂಡುಬಿದಿರೆ ತಾಲೂಕು ಪಾಲಡ್ಕ ಗ್ರಾಮ ಪಂಚಾಯತ್ ನ ಗ್ರಾಮ ಸಭೆ ಆಗಸ್ಟ್ ಐದರಂದು ಕಡಂದಲೆಯ ಪಲ್ಕೆ ಗಣೇಶ್ ದರ್ಶನ್ ಸಭಾಂಗಣದಲ್ಲಿ ನಡೆಯಿತು. ಪಶು ಸಂಗೋಪನೆ ಇಲಾಖೆಯಲ್ಲಿ 31 ಜನ ಅಧಿಕಾರಿಗಳು ಇರಬೇಕಾದಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಆ ಇಲಾಖೆಯ ಡಾ. ಮಲ್ಲಿಕಾರ್ಜುನ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ, ಪಶುಗಳ ಚಿಕಿತ್ಸೆಗಾಗಿ ಪಶು ಸಂಜೀವಿನಿ ಸಂಖ್ಯೆ 1962 ನನ್ನು ಸಂಪರ್ಕಿಸಿದರೆ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ದೊರಕುತ್ತದೆ. ಬೀದಿ ನಾಯಿಗಳ ತೊಂದರೆಯನ್ನು ನಿವಾರಿಸಲು ಜನರೊಂದಿಗೆ ಸಾಮೂಹಿಕವಾಗಿ ನಿವಾರಿಸುವ ಭರವಸೆಯನ್ನು ನೀಡಿದರು.
ಕಳೆದ 5 ವರ್ಷಗಳಿಂದ ಪಾಲಡ್ಕ ಗ್ರಾಮ ಪಂಚಾಯತ್ನ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿಯನ್ನು, ಚರಂಡಿಯನ್ನು ರಿಪೇರಿಗೊಳಿಸಿಲ್ಲ. ಸಾಮಾಜಿಕ ಅರಣ್ಯ ವಿಭಾಗದವರು ಪಂಚಾಯತ್ ಕಟ್ಟಡದ ಎದುರಲ್ಲಿ ಚರಂಡಿಯಲ್ಲಿ ನೀರು ನಿಲ್ಲುವಲ್ಲಿ, ಹತ್ತಿರ ಹತ್ತಿರ ಗಿಡವನ್ನು ನೆಟ್ಟು ಹೋಗಿರುತ್ತಾರೆ. ಪಂಚಾಯತ್ ಸದಸ್ಯರೇ ಆ ರೀತಿ ನಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಕೇಳದೆ ತೆರಳಿರುತ್ತಾರೆ.
ವರಣಬೆಟ್ಟಿನಲ್ಲಿರುವ ರೆಸಾರ್ಟಿಗೆ ಮರ ಕಡಿಯಲು ಪರವಾನಿಗೆ ನೀಡುವ ಅರಣ್ಯ ಇಲಾಖೆಯ ಅಧಿಕಾರಿಗಳು ಮನೆಗೆ ತೊಂದರೆಪಡಿಸುವ ಒಂದೆರಡು ಮರಗಳನ್ನು ನಿವಾರಿಸುವುದಕ್ಕೂ ಒಪ್ಪಿಗೆಯನ್ನು ನೀಡುತ್ತಿಲ್ಲ ಎಂದು ವಿನಯ್ ಹಾಗೂ ಗಣೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಮೆಸ್ಕಾಂ ಅವರು ವಿದ್ಯುತ್ ತಂತಿಗಳ ಮೇಲೆ ಗಿಡ ಮರಗಳು ಆವರಿಸಿದ್ದರು ಸಮರ್ಪಕವಾಗಿ ನಿವಾರಿಸುತ್ತಿಲ್ಲ. 2024ರಲ್ಲಿ ನೀಡಿದ ದೂರನ್ನು ವಿಲೇವಾರಿ ಮಾಡಿಲ್ಲ ಎಂದು ಸಭೆಯಲ್ಲಿ ಪಂಚಾಯತ್ ಸದಸ್ಯರಾಗಿ ಎಲ್ಲರೂ ಒಕ್ಕೊರಲಿನಿಂದ ದೂರಿದರು. ಈ ಬಗ್ಗೆ ಮೆಸ್ಕಾಂನ ಅಧಿಕಾರಿ ಮಮತಾ ನಿರುತ್ತರರಾದರು.
ಯಾವುದೇ ಕಲ್ಲಿನ ಕೋರೆ ನಡೆಸಲು ಗ್ರಾಮ ಪಂಚಾಯತಿಯಿಂದ ಒಪ್ಪಿಗೆಯನ್ನು ನೀಡಿರುವುದಿಲ್ಲ ಎಂದು ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ ಸಭೆಯಲ್ಲಿ ಜಾಹೀರುಗೊಳಿಸಿದರು.
ಪಂಚಾಯತ್ ನ ಪರವಾನಿಗೆಲ್ಲದೆ ರೆಸಾರ್ಟ್ ಇತ್ಯಾದಿ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಗೆ ನೋಟಿಸು ನೀಡುವಂತೆ ದ.ಕ. ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸುಚರಿತ ಶೆಟ್ಟಿ ಅಧಿಕಾರಿಗಳನ್ನು ವಿನಂತಿಸಿದರು.

ವೇದಿಕೆಯಲ್ಲಿ ಅಧ್ಯಕ್ಷೆ ಅಮಿತಾ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಸಾಗರ್ ಕ್ಷಯರೋಗ ನಿವಾರಣೆಯ ಅಗತ್ಯವನ್ನು ತಿಳಿಸಿದರು. ಬೆಳುವಾಯಿ ಅರಣ್ಯ ಇಲಾಖೆಯ ಚಂದ್ರಶೇಖರ್, ಗ್ಯಾರೆಂಟಿ ಸಮಿತಿಯ ಗಣೇಶ್, ಕಂದಾಯ ಇಲಾಖೆಯ ಅನಿಲ್, ಹಾಜರಿದ್ದು ಮಾಹಿತಿಗಳನ್ನು ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಕ್ಷಿತಾ ಡಿ ಸ್ವಾಗತಿಸಿ ವರದಿ, ಜಮಾ ಖರ್ಚಿನ ವಿವರ ನೀಡಿದರು. ಕಾರ್ಯದರ್ಶಿ ಮೋಹಿನಿ ವಾರ್ಡ್ ಸಭೆಗಳ ನಡವಳಿಯನ್ನು ಪ್ರಸ್ತುತಪಡಿಸಿದರು. ನಾಗರಿಕರು ಮನೆ ತೆರಿಗೆ, ನೀರಿನ ಕರ ಬಾಕಿ ಪಾವತಿಸಿ, ಸವಲತ್ತಿಗಾಗಿ ಅರ್ಜಿ ನೀಡಬಹುದು ಎಂದು ತಿಳಿಸಲಾಯಿತು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ