ಪುರುಷೋತ್ತಮ ಭಟ್ ಕೆ – ಕಾಸರಗೋಡು ತಾಲೂಕು ತುಳುವ ಮಹಾಸಭೆ ಸಂಚಾಲಕರಾಗಿ ನೇಮಕ

0
62

ಕಾಸರಗೋಡು: ತುಳುನಾಡಿನ ಭಾಷಾ–ಸಂಸ್ಕೃತಿಯ ಉಳಿವಿಗಾಗಿ ಶತಮಾನೋತ್ಸವದ ದಿಕ್ಕಿನಲ್ಲಿ ಚಟುವಟಿಕೆ ಆರಂಭಿಸಿರುವ ತುಳುವ ಮಹಾಸಭೆ, ತನ್ನ ಪುನಶ್ಚೇತನ ಯಾತ್ರೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಪ್ರಕ್ರಿಯೆಯಲ್ಲಿ ಕಾಸರಗೋಡು ತಾಲೂಕಿಗೆ ಪ್ರಸಿದ್ಧ ಪತ್ರಕರ್ತ ಹಾಗೂ ಸಾಂಸ್ಕೃತಿಕ ನಾಯಕ ಪುರುಷೋತ್ತಮ ಭಟ್ ಕೆ ಅವರನ್ನು ತಾಲೂಕು ಸಂಚಾಲಕರಾಗಿ ನೇಮಕ ಮಾಡಲಾಗಿದೆ.

ಎಂ.ಎ. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಥಿಯೇಟರ್ ಡ್ರಾಮಾ ಡಿಪ್ಲೊಮಾ ಪದವಿದಾರರಾದ ಭಟ್ ಅವರು, ಹವ್ಯಾಸಿ ಯಕ್ಷಗಾನ ಮತ್ತು ತಾಳಮದ್ದಳೆ ಕಲಾವಿದರೂ ಹೌದು. ಆಕಾಶವಾಣಿಯಲ್ಲಿ ತಾಳಮದ್ದಳೆ ಕಲಾವಿದರಾಗಿ ಚಂದದ ಹೆಸರು ಗಳಿಸಿರುವ ಅವರು, ‘ನೂರೊಂದು ಪದಗಳ ಹೆಸರಿಲ್ಲದ ಕಥೆಗಳು’ ಮತ್ತು ‘ಅಕ್ಷರ ಮಿಥುನ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿದ್ದಾರೆ.

ಭಟ್ ಅವರು ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದಲ್ಲಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ 19 ವರ್ಷಗಳಿಂದ ಹಲವಾರು ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ತಮ್ಮದೇ ಆದ ‘ಸಮರಸ ಸುದ್ದಿ’ ಎಂಬ ಆನ್‌ಲೈನ್ ಮಾಧ್ಯಮವನ್ನು ಸ್ಥಾಪಿಸಿ, ಕಳೆದ 9 ವರ್ಷಗಳಿಂದ ಸಂಪಾದಕರಾಗಿ ಮಾಧ್ಯಮ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಅವರು, ಹಲವಾರು ಸಂಘಟನೆಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ: ಕೇರಳ ಜರ್ನಲಿಸ್ಟ್ ಯೂನಿಯನ್ ರಾಜ್ಯ ಸಹ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ – ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಜಾನಪದ ಪರಿಷತ್ – ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಬರಹಗಾರರ ಸಂಘ ಸದಸ್ಯ, ಮತ್ತು ‘ತುಳುವೆರೆ ಆಯನ ಕೂಟ ಕಾಸರಗೋಡು ಇದರ ಸಕ್ರಿಯ ಸದಸ್ಯರಾಗಿದ್ದಾರೆ.

ಶತಮಾನೋತ್ಸವದ ದಿಕ್ಕಿನಲ್ಲಿ ಮಹಾಸಭೆಯ ಚಟುವಟಿಕೆಗಳು:
1928ರಲ್ಲಿ ಉಡುಪಿಯಲ್ಲಿ ಎಸ್.ಯು. ಪಣಿಯಾಡಿ ಅವರ ನೇತೃತ್ವದಲ್ಲಿ ಸ್ಥಾಪಿತವಾದ ತುಳುವ ಮಹಾಸಭೆ ಈಗ 97 ವರ್ಷಗಳನ್ನು ಪೂರೈಸಿ, ಶತಮಾನೋತ್ಸವದ ತಯಾರಿ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ತುಳುನಾಡಿನ ಕಲಾ, ಸಾಹಿತ್ಯ, ಜನಪದ ಪರಂಪರೆಗಳ ಪುನಶ್ಚೇತನ, ‘ತುಳುನಾಡನ್ ಕಳರಿ’ ತರಬೇತಿ ಹಾಗೂ ಮರ್ಮ ಚಿಕಿತ್ಸೆಯ ಉಚ್ಚಾಶ್ರಯ, ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಮತ್ತು ಸೌಹಾರ್ದಯುತ ಸಮಾಜದ ನಿರ್ಮಾಣದಂತಹ ಬಹುಮುಖ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.

ಈ ನಿಟ್ಟಿನಲ್ಲಿ ಕಾಸರಗೋಡು ತಾಲೂಕಿನಲ್ಲಿ ಚಟುವಟಿಕೆಗಳಿಗೆ ಬುನಾದಿ ಹಾಕಲು ಪುರುಷೋತ್ತಮ ಭಟ್ ಅವರ ನೇತೃತ್ವ ಮಹತ್ವಪೂರ್ಣವಾಗಲಿದೆ.

LEAVE A REPLY

Please enter your comment!
Please enter your name here