ಮಂಗಳೂರು: ರಣ ಮಳೆಗೆ ಮಲೆನಾಡು, ಕರಾವಳಿ ಭಾಗ ಅಲ್ಲೋಲ, ಕಲ್ಲೋಲವೇ ಆಗೋಗಿದೆ. ಮರುಗಳು ಉರುಳ್ತಿವೆ. ವಿದ್ಯುತ್ ಕಂಬಗಳು ಬೀಳುತ್ತಿವೆ. ನಿರಂತರ ಸುರಿಯುತ್ತಿರೋ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಭಯದಲ್ಲೇ ಜನರು ಜೀವನ ಮಾಡೋ ಪರಿಸ್ಥಿತಿಯಲ್ಲಿ ಮಳೆರಾಯ ತಂದಿಟ್ಟಿದ್ದಾನೆ. ಇಷ್ಟಾದರೂ ವರುಣನ ಅಬ್ಬರ ಮುಂದುವರಿಯಲಿದೆ.
ಕೊಡಗು, ಚಿಕ್ಕಮಗಳೂರು, ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅದು ಜುಲೈ 31ರ ವರೆಗೂ ಕರ್ನಾಟಕದಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು..ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಜುಲೈ 31 ರವರೆಗೂ ಭಾರಿ ಮಳೆ
ರಾಜ್ಯದಲ್ಲಿ ಜುಲೈ 31 ರವರೆಗೂ ಭಾರಿ ಮಳೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಿಗೆ ಮುಂದಿನ 2 ದಿನವೂ ಆರೆಂಜ್ ಅಲರ್ಟ್ ಇದ್ದು, ಜುಲೈ 31 ರವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮಲೆನಾಡು ಜಿಲ್ಲೆಗಳಿಗೂ ಮಳೆ ಆರ್ಭಟ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ , ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಜುಲೈ 29 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜುಲೈ 30 ಹಾಗೂ ಜುಲೈ 31 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಾವಿನಗುಳಿ ಜೆಡ್ಡು, ಅಂಪಾರು ಮಧ್ಯದ ಕಾಲು ಸುಂಕ ದುರಸ್ತಿ ಮಾಡದ ಕಾರಣ ಕಾಲಸುಂಕ ಮುರಿದು ಬಿದ್ದಿದೆ. ಇದರಿಂದ ಊರಿನ ಸಂಪರ್ಕವೇ ಬಂದ್ ಆಗಿದ್ದು, ವಿದ್ಯಾರ್ಥಿಗಳು ಸಾರ್ವಜನಿಕರು ಪರದಾಡ್ತಿದ್ದಾರೆ. 40 ಮನೆಗಳ ಜನ ದಿಗ್ಬಂಧನದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.