ಒ೦ದು ವಾರ ಬಿಡುವು ಕೊಟ್ಟಿದ್ದ ಮಳೆರಾಯ ಇದೀಗ ದಿಢೀರ್ ಆಗಮನಕ್ಕೆ ಸಿದ್ದವಾಗಿದೆ. ನವೆಂಬರ್ ನಂತರ ಮಳೆ ಕಡಿಮೆಯಾಗಿತ್ತದೆ ಎಂದು ವರದಿ ನೀಡಿದ್ದ ಹವಾಮಾನ ಇಲಾಖೆ ಇದೀಗ ಮತ್ತೆ ರಾಜ್ಯದಲ್ಲಿ ಮಳೆ ಅಲರ್ಟ್ ಘೋಷಿಸಿದೆ. ನವೆಂಬರ್ 4ರ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದ್ದು, ಈ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆಯೂ ಸೂಚನೆ ನೀಡಲಾಗಿದೆ
ಅಲ್ಲದೇ ಇಂದು ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ನವೆಂಬರ್ 5 ಮತ್ತು 6 ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಮೂರು ದಿನ ಭಾರೀ ಮಳೆ!
, ಕಳೆದವಾರ ರಾಜ್ಯದಲ್ಲಿ ಒಣಹವೆ ಮುಂದುವರೆದಿತ್ತು. ಆದ್ರೆ ಹೊಸ ವಾರ ಬರುತ್ತಿದ್ದಂತೆ ವರುಣಾರ್ಭಟದ ಮುನ್ಸೂಚನೆ ಬಂದಿದೆ. ಈ ಪರಿಣಾಮ ಇಂದು ಸೇರಿ ಮುಂದಿನ ಎರಡು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್!
ಕರ್ನಾಟಕದ 7 ಜಿಲ್ಲೆಗಳಿಗೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಕಲ್ಬುರ್ಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಮೂರುದಿನ ಗುಡುಗು, ಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ವಾತಾವರಣ ಹೇಗಿರುತ್ತದೆ?
ಇನ್ನು ಬೆಂಗಳೂರಿನಲ್ಲೂ ವಾರವಿಡೀ ಮೋಡ ಕವಿದ ವಾತಾವರಣದೊಂದಿಗೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿ ಪ್ರಕಾರ, ಬೆಂಗಳೂರಿನಲ್ಲಿ ನವೆಂಬರ್ 8 ರವರೆಗೂ ಮೋಡಕವಿದ ವಾತಾವರಣ ಇರಲಿದ್ದು, ಕೆಲವು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಆದ್ರೆ ಹಗಲಿನಲ್ಲಿ ತಾಪಮಾನ ಮಾತ್ರ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಸೂಚನೆ ನೀಡಲಾಗಿದೆ.
ನವೆಂಬರ್ 4 ರಿಂ 6 ರವರೆಗೆ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಇಲಾಖೆಯಿಂದ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ.
ನವೆಂಬರ್ 5-6 ಎಲ್ಲಾ ಜಿಲ್ಲೆಗಳಲೂ ಮಳೆ
ಅದೇ ರೀತಿ ನವೆಂಬರ್ 5 ಹಾಗೂ 6 ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಈ ಎರಡು ದಿನಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬೀ ಸಮುದ್ರದಲ್ಲಾದ ವಾಯುಭಾರ ಕುಸಿತದ ಪರಿಣಾಮ ಈ ಹವಾಮಾನ ವೈಪರೀತ್ಯವಾಗಿದೆ ಎಂದು ಹೇಳಲಾಗಿದ್ದು, ಈ ವಾರವಿಡೀ ಕೆಲವು ಜಿಲ್ಲೆಗಳು ಮೋಡಕವಿದ ವಾತಾವರಣದೊಂದಿಗೆ, ಮಳೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಯಾರಾದರೂ ಟ್ರಿಪ್, ಟ್ರಾವೆಲ್ ಮಾಡೋ ಪ್ಲಾನ್‌ನಲ್ಲಿದ್ದರೆ ಮೊದಲೇ ಹವಾಮಾನ ಬದಲಾವಣೆಯನ್ನು ನೋಡಿಕೊಂಡು ಹೋದರೆ ಉತ್ತಮ

