ಮಂಗಳೂರು: ನಗರದ ಖ್ಯಾತ ಸಿವಿಲ್ ಎಂಜಿನಿಯರ್ ಹಾಗೂ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಅವರು ಎಸೋಸಿಯೇಶನ್ ಆಫ್ ಕನ್ಸಲ್ಟೆಂಟ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾ ಪ್ರತಿಷ್ಠಿತ ಸಂಸ್ಥೆಯ ಕೇಂದ್ರಾಡಳಿತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿ 2025-27ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಸೋಸಿಯೇಶನ್ ಆಫ್ ಕನ್ಸಲ್ಟೆಂಟ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾ ಸಂಸ್ಥೆಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಸೋಮವಾರ (ಆಗಸ್ಟ್ 25) ಜರುಗಿದ ಆನ್‌ಲೈನ್ ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದ ಹೇಮಂತ್ ಹರಿ ದತ್ರಕ್ ಅವರು ರಾಜೇಂದ್ರ ಕಲ್ಬಾವಿ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿ, ಪ್ರಮಾಣ ಪತ್ರವನ್ನು ನೀಡಿದರು.
ರಾಜೇಂದ್ರ ಕಲ್ಬಾವಿ ಅವರು ಇದೇ ಸಂಸ್ಥೆಯಲ್ಲಿ 2023-25ರ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ಈ ಪ್ರತಿಷ್ಠಿತ ಸಂಸ್ಥೆಯು ರಾಷ್ಟ್ರಾದ್ಯಂತ 52 ಶಾಖೆಗಳನ್ನು ಹೊಂದಿದ್ದು, ಸುಮಾರು 8,000ಕ್ಕೂ ಅಧಿಕ ಎಂಜಿನಿಯರ್‌ಗಳನ್ನು ಸದಸ್ಯರನ್ನಾಗಿ ಹೊಂದಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಕಲ್ಬಾವಿ, ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಸಂಸ್ಥೆಯ ಹಾಗೂ ಸದಸ್ಯರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಬದ್ಧರಾಗಿರುವುದಾಗಿ ಆಶ್ವಾಸನೆ ನೀಡಿದರು.
ಕಲ್ಬಾವಿ ಅವರು ಆಧುನಿಕ ಕಟ್ಟಡ ವಿನ್ಯಾಸ, ನಿರ್ಮಾಣ ಕ್ಷೇತ್ರದಲ್ಲಿ ಪರಿಣತರಾಗಿದ್ದು, ಜಲ ಸಂರಕ್ಷಣೆ- ಮಳೆ ನೀರು ಕೊಯ್ಲು ನಿರ್ವಹಣೆಯಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಈ ಕುರಿತಾದ ಅನೇಕ ಮಾದರಿಗಳನ್ನು ಅವರು ನಿರ್ಮಾಣ ಮಾಡಿದ್ದು, ಇವೆಲ್ಲವೂ ರಾಜ್ಯಾದ್ಯಂತ ಮನ್ನಣೆಗೆ ಪಾತ್ರವಾಗಿವೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೂ ಕಲ್ಬಾವಿ ಪಾತ್ರರಾಗಿದ್ದಾರೆ.