ಮಹಾತ್ಮರ ಸಂಗದಲ್ಲಿ ಬರುವವರೆಲ್ಲರೂ ಮಹಾತ್ಮರಂತೆಯೇ ಆಗುತ್ತಾರೆ. ಹನುಮಂತನ ಶಕ್ತಿ, ಸಾಮರ್ಥ್ಯದ ಅರಿವನ್ನು ಹೊಂದಿದ್ದ ಜಾಂಬವಂತ ಅದನ್ನು ಗುರುತಿಸಿ ಆತನನ್ನು ಪ್ರೇರೇಪಿಸಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ. ಶ್ರೀರಾಮನಿಗೆ ಕೂಡಾ ಹನುಮನ ಸಾಮಾರ್ಥ್ಯ ದ ಅರಿವಿದ್ದುದರಿಂದಲೇ ತನ್ನ ಅನುಗ್ರಹದೊಂದಿಗೆ ಮುದ್ರೆಯುಂಗುರವನ್ನು ಸೀತೆಗೆ ತೋರಿಸಲೆಂದು ಹನುಮಂತನಿಗೆ ನೀಡಿದ ಇವರ ಪ್ರೇರಣೆಯಿಂದಾಗಿಯೇ ತ್ರಿಲೋಕಾಧಿಪತಿಗಳನ್ನು ಗೆದ್ದಂತಹ ರಾವಣನನ್ನು ಎದುರಿಸುವ ಸಾಮರ್ಥ್ಯವನ್ನು ಹನುಮಂತ ಗಳಿಸಿಕೊಂಡ ಎಂಬುದಾಗಿ ಪ್ರಸಿದ್ಧ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೫ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ಏಕಾದಶ ಸೋಪಾನ ‘ ಸ್ವರ್ಣ ಲಂಕೆಯ ವೈದೇಹಿ’ ಎಂಬ ವಿಷಯದ ಕುರಿತು ನವಂಬರ್ ೧೫ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು. ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ.ದ ಗೌರವಾಧ್ಯಕ್ಷರಾದ ಶ್ರೀ ನಿತ್ಯಾನಂದ ಪೈ, ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಉಪಾಧ್ಯಕ್ಷರಾದ ಏರ್ ವೈಸ್ ಮಾರ್ಷಲ್ ಶ್ರೀ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿದರು.

