ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಿಹಿಸುದ್ದಿ ನೀಡಿದೆ. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಪ್ರಕ್ರಿಯೆಯು ಈಗ ಪುನರಾರಂಭಗೊಂಡಿದ್ದು, ಸಾರ್ವಜನಿಕರು ತಮ್ಮ ಕಾರ್ಡ್‌ಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ ಲಾಭ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿರುವುದರಿಂದ, ಈ ಅವಕಾಶವನ್ನು ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಪಡಿತರ ಚೀಟಿಯಲ್ಲಿ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು :
* ಹೊಸ ಸದಸ್ಯರ ಹೆಸರು ಸೇರ್ಪಡೆ : ಕುಟುಂಬಕ್ಕೆ ಹೊಸದಾಗಿ ಮದುವೆಯಾಗಿ ಬಂದ ಸೊಸೆ ಅಥವಾ ಜನಿಸಿದ ಮಗುವಿನ ಹೆಸರನ್ನು ಸೇರಿಸಲು ಅವಕಾಶವಿದೆ.
* ಹೆಸರು ತಿದ್ದುಪಡಿ : ಆಧಾರ್ ಕಾರ್ಡ್‌ನಲ್ಲಿರುವಂತೆ ರೇಷನ್ ಕಾರ್ಡ್‌ನಲ್ಲಿ ಹೆಸರು ಇಲ್ಲದಿದ್ದರೆ ಅದನ್ನು ಸರಿಪಡಿಸಬಹುದು.
* ವಿಳಾಸ ಬದಲಾವಣೆ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಸ ಬದಲಿಸಿದರೆ ವಿಳಾಸವನ್ನು ಅಪ್‌ಡೇಟ್ ಮಾಡಬಹುದು.
* ಪಡಿತರ ಅಂಗಡಿ ಬದಲಾವಣೆ : ನಿಮ್ಮ ವಾಸಸ್ಥಳಕ್ಕೆ ಹತ್ತಿರವಿರುವ ನ್ಯಾಯಬೆಲೆ ಅಂಗಡಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
* ಇ-ಕೆವೈಸಿ (e-KYC) : ಬಯೋಮೆಟ್ರಿಕ್ ಅಥವಾ ಆಧಾರ್ ಲಿಂಕ್ ಸಮಸ್ಯೆಯಿದ್ದಲ್ಲಿ ಸರಿಪಡಿಸಿಕೊಳ್ಳಬಹುದು.
* ಕುಟುಂಬದ ಯಜಮಾನನ ಬದಲಾವಣೆ : ಅನಿವಾರ್ಯ ಕಾರಣಗಳಿಂದ ಮನೆಯ ಯಜಮಾನರನ್ನು ಬದಲಾಯಿಸಬೇಕಿದ್ದಲ್ಲಿ ಈ ಹಂತದಲ್ಲಿ ಮಾಡಬಹುದು.
ತಿದ್ದುಪಡಿಗಾಗಿ ಹೋಗುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ :
*ಮಗುವಿನ ಹೆಸರು ಸೇರ್ಪಡೆಗೆ – ಜನನ ಪ್ರಮಾಣ ಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್ ಅಗತ್ಯ.
*ಹೊಸ ಸದಸ್ಯರ ಸೇರ್ಪಡೆಗೆ – ಆಧಾರ್ ಕಾರ್ಡ್ ಹಾಗೂ ಹಳೆಯ ಕಾರ್ಡ್ ನಿಂದ ಹೆಸರು ತೆಗೆದುಹಾಕಿದ ಪತ್ರ (surrender certificate)
*ವಿಳಾಸ ಬದಲಾವಣೆಗೆ – ಹೊಸ ವಿಲಾಸದ ಪುರಾವೆ (ವಿದ್ಯುತ್ ಬಿಲ್ ಅಥವಾ ಬಾಡಿಗೆ ಕರಾರು)
ಯಜಮಾನನ ಬದಲಾವಣೆಗೆ – ಮರಣ ಪ್ರಮಾಣ ಪತ್ರ (ಅಗತ್ಯವಿದ್ದರೆ)ಮತ್ತು ಹೊಸ ಯಜಮಾನನ ಆಧಾರ್ ಕಾರ್ಡ್.
ಈ ಪ್ರಕ್ರಿಯೆಯು ಡಿಜಿಟಲ್ ಆಗಿರುವುದರಿಂದ ಸಾರ್ವಜನಿಕರು ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಈ ಕೆಳಗಿನ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು :
ಗ್ರಾಮ ಒನ್ (Grama One) ಕೇಂದ್ರಗಳು, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳು, ಸಿಎಸ್ ಸಿ (CSC) ಸಾಮಾನ್ಯ ಸೇವಾ ಕೇಂದ್ರಗಳು.
ಗಮನಿಸಿ : ಸರ್ವರ್ ದಟ್ಟಣೆಯನ್ನು ನಿಯಂತ್ರಿಸಲು ಆಹಾರ ಇಲಾಖೆಯು ಜಿಲ್ಲಾವಾರು ಸಮಯದ ಮಿತಿಯನ್ನು ನಿಗದಿಪಡಿಸಿದೆ. ಆದ್ದರಿಂದ ನಿಮ್ಮ ಭಾಗದ ನಿಗದಿತ ಅವಧಿಯಲ್ಲೇ ಅರ್ಜಿ ಸಲ್ಲಿಸುವುದು ಉತ್ತಮ.

