ಬಿಜೆಪಿ ಮುಖಂಡರನ್ನು ಆಂಧ್ರದಲ್ಲಿ ಕೊಲೆಗೈದ ರೆಡ್ಡಿ ಗ್ಯಾಂಗ್ ಅರೆಸ್ಟ್!

0
20

ಬೆಂಗಳೂರು / ಮಹದೇವಪುರ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಅವರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸೇರಿ 6 ಮಂದಿಯ ಗ್ಯಾಂಗನ್ನು ನರ್ಸಮ್‌ಪೇಟೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬರೋಬ್ಬರಿ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವೇ ಈ ಭೀಕರ ಕೃತ್ಯಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದ ಪ್ರಮುಖ ಆರೋಪಿ, ಕೊಲೆಯಾದ ವೀರಸ್ವಾಮಿ ರೆಡ್ಡಿ ಅವರ ಮಾಜಿ ಉದ್ಯಮ ಪಾಲುದಾರ ಮಾಧವರೆಡ್ಡಿ, ಅನಿಲ್ ರೆಡ್ಡಿ, ನಾಗಿರೆಡ್ಡಿ, ಚಿನ್ನಾರೆಡ್ಡಿ ಅಲಿಯಾಸ್ ಇಂದ್ರಸೇನಾ ರೆಡ್ಡಿ, ಗೋಪಿ ರೆಡ್ಡಿ ಮತ್ತು ರಘುರಾಮ್ ರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ.

ಕೊಲೆಗೆ ಕಾರಣವಾದ ಹಣದ ವೈಷಮ್ಯ

ಮಾಧವರೆಡ್ಡಿ ಹಾಗೂ ವೀರಸ್ವಾಮಿ ರೆಡ್ಡಿ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಆದರೆ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆ ತೀವ್ರ ವೈಷಮ್ಯ ಬೆಳೆದಿತ್ತು. ವೀರಸ್ವಾಮಿ ತನಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿದ್ದಾನೆ ಎಂಬುದು ಮಾಧವರೆಡ್ಡಿಯ ಪ್ರಬಲ ಆರೋಪವಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ, ತನ್ನ ಮಾಜಿ ಪಾಲುದಾರನನ್ನೇ ಮುಗಿಸಲು ಮಾಧವರೆಡ್ಡಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದನು. ಅದಕ್ಕೆ ತಕ್ಕಂತೆ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡುವುದಕ್ಕೆ ಎಲ್ಲವನ್ನೂ ಯೋಜನೆ ಮಾಡಿದ್ದನು.

ಪಕ್ಕಾ ಪ್ಲಾನ್ ಮಾಡಿ ನಡೆದ ಹತ್ಯೆ

ಮಾಧವರೆಡ್ಡಿ ಮತ್ತು ಆತನ ಗ್ಯಾಂಗ್, ತಂದೆ-ಮಗನನ್ನು ಹತ್ಯೆ ಮಾಡಲು ವ್ಯವಸ್ಥಿತ ಸಂಚು ರೂಪಿಸಿತ್ತು. ಮೊದಲಿಗೆ, ವೀರಸ್ವಾಮಿ ರೆಡ್ಡಿ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಲಯದ ವಿಚಾರಣೆಗೆ ಬರುವಂತೆ ಮಾಡಿದ್ದರು. ನಂತರ, ಕೊಲೆಯಾದ ಪ್ರಶಾಂತ್ ರೆಡ್ಡಿ ಬಳಿ ರಾಜಿ ಸಂಧಾನ ಮಾಡಿಸುವುದಾಗಿ ನಂಬಿಸಿ, ತಂದೆ-ಮಗ ಇಬ್ಬರನ್ನೂ ನರ್ಸಮ್‌ಪೇಟೆ ಬಳಿಗೆ ಬರುವಂತೆ ಮಾಡಿದ್ದರು.

ಯೋಜನೆಯ ಪ್ರಕಾರ ಅಲ್ಲಿಗೆ ಬಂದ ವೀರಸ್ವಾಮಿ ರೆಡ್ಡಿ ಮತ್ತು ಪ್ರಶಾಂತ್ ರೆಡ್ಡಿ ಅವರನ್ನು ಅಪಹರಿಸಿ, ಮಾಧವರೆಡ್ಡಿ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಮಾಧವರೆಡ್ಡಿ ತನ್ನಲ್ಲಿದ್ದ ದ್ವೇಷ ತೀರಿಸಿಕೊಳ್ಳಲು ವೀರಸ್ವಾಮಿಯ ಮುಖವನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸಮ್‌ಪೇಟೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here