ದಿ. : 03-12-2025 ಬೆಂಗಳೂರು : ಕರ್ನಾಟಕ ಸರ್ಕಾರದ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗಿದೆ. ಶೋಷಿತ ಮತ್ತು ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಅಭಿನವ ದೇವರಾಜ ಅರಸ್’ ಎಂದು ಕರೆಯಲಾಗುತ್ತಿದೆ.
ದೀರ್ಘಕಾಲ ನಿಷ್ಕ್ರಿಯವಾಗಿದ್ದ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿರುವುದು, ಈಡಿಗ ಜಿಲ್ಲವ ನಾಮಧಾರಿ ಸೇರಿದಂತೆ ಹಿಂದುಳಿದ ಸಮಾಜದ 26 ಪಂಗಡಗಳಲ್ಲಿ ಹರ್ಷ ಮೂಡಿಸಿದೆ. ನಿಗಮವು ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಸಮಗ್ರ ನೀಲನಕ್ಷೆಯನ್ನು ಸಿದ್ಧಪಡಿಸಿದೆ.
ನೀಲನಕ್ಷೆಯ ಪ್ರಮುಖ ಅಂಶಗಳಲ್ಲಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ವಿದ್ಯಾರ್ಥಿ ವೇತನ, ವಿದೇಶಿ ಉನ್ನತ ಶಿಕ್ಷಣಕ್ಕೆ ಸಹಾಯ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಲ್ಯಾಪ್‌ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ, ಹಾಗೂ ಐಎಎಸ್–ಐಪಿಎಸ್ ತರಬೇತಿ ಯೋಜನೆಗಳು ಸೇರಿವೆ.
ಉದ್ಯೋಗ ಮತ್ತು ಸ್ವಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸ್ವಉದ್ಯೋಗ ತರಬೇತಿ, ಸಾಲ ಸೌಲಭ್ಯ, ಕುಲಕಸುಬಾದ ನೀರಾ ಉತ್ಪಾದನೆ ಮತ್ತು ಶೇಂದಿ ಇಳಿಸುವ ಕಾರ್ಯಕ್ಕೆ ಆಧುನಿಕ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ನಾಟಿವೈದ್ಯ ಮತ್ತು ಆಯುರ್ವೇದ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.

ಉದ್ಯಮ ಕ್ಷೇತ್ರದಲ್ಲಿ ಕಲ್ಲರಸ ತಯಾರಿಕೆ, ಪ್ರವಾಸೋದ್ಯಮ, ಸೇವಾಧಾರಿತ ಉದ್ಯಮಗಳ ಸ್ಥಾಪನೆಗೆ ಸಬ್ಸಿಡಿಯೊಂದಿಗೆ ಸಹಕಾರ ನೀಡಲಾಗುತ್ತದೆ. ಶೇಂದಿ ಮತ್ತು ಕಲ್ಲರಸ ಉದ್ಯಮದ ಮೌಲ್ಯವರ್ಧನೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರ ಸ್ಥಾಪನೆಗೂ ಪ್ರಸ್ತಾವನೆ ಇದೆ.
ಇದಲ್ಲದೆ, ಸಮುದಾಯದ ಧಾರ್ಮಿಕ ಕೇಂದ್ರಗಳ ಅರ್ಚಕರು ಹಾಗೂ ಸಹಾಯಕರಿಗೆ ಮಾಸಾಶನ, ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಗುಂಪುಗಳ ಮೂಲಕ ಕಡಿಮೆ ಬಡ್ಡಿದರದ ಸಾಲ, ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕ್ರೀಡೆ, ಸಿನೆಮಾ ಮತ್ತು ಕಲೆಗಳಲ್ಲಿ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಯೋಜನೆಗಳೂ ಸೇರಿವೆ.
ಸಮಾಜದ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ರಾಜ್ಯಮಟ್ಟದ ನಗದು ಪ್ರಶಸ್ತಿ ನೀಡುವ ಪ್ರಸ್ತಾವನೆಯೂ ಇದೆ. ಈ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸುಮಾರು ₹500 ಕೋಟಿ ಅನುದಾನ ಅಗತ್ಯವಿದ್ದು, ಅದನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ.

