ದಕ್ಷಿಣ ಕನ್ನಡ :-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಅಧಿಸೂಚನೆ ದಿನಾಂಕ 19-08-2025 (ಪತ್ರಿಕಾ ಪ್ರಕಟಣೆ ದಿನಾಂಕ 22-08-2025) ರಂದು ಪ್ರಕಟಿಸಿದ ಜಾತಿವಾರು ಪಟ್ಟಿಯ 1,400 ಜಾತಿಗಳ ಪೈಕಿ ಕರಾಡ ಬ್ರಾಹ್ಮಣರ ಹೆಸರು ಸೇರಿಲ್ಲ, ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ಕರಾಡ ಬ್ರಾಹ್ಮಣ ಸಮಾಜ ತುರ್ತಾಗಿ ಸಭೆ ಸೇರಿ ಪಟ್ಟಿಯಲ್ಲಿ ಹೆಸರನ್ನು ಸೇರಿಸಬೇಕೆಂಬ ಉದ್ದೇಶದಿಂದ ಕರಾಡ ಬ್ರಾಹ್ಮಣರ ಹಲವು ಸ್ಥಳೀಯ ಸಂಘಗಳ ಪದಾಧಿಕಾರಿಗಳು ತುರ್ತಾಗಿ ಗೂಗಲ್ ಮೀಟಿಂಗ್ ಮೂಲಕ ಚರ್ಚಿಸಿ ಕರಾಡ ಸಮಾಜವನ್ನು ಜಾತಿವಾರು ಪಟ್ಟಿಯಲ್ಲಿ ಸೇರಿಸಬೇಕೆಂಬ ಒತ್ತಾಯವನ್ನು ಸಂಬಂಧ ಪಟ್ಟ ಆಯೋಗಕ್ಕೆ ಮಾಡಬೇಕೆಂದು ನಿರ್ಧರಿಸಿ ಆಯೋಗಕ್ಕೆ ಮನವಿ ಆಗ್ರಹ ಪತ್ರವನ್ನು ಸಲ್ಲಿಸುವುದಾಗಿ ನಿರ್ಧರಿಸಿ ಕರಾಡ ಬ್ರಾಹ್ಮಣ ಸಮಾಜದ ಎಲ್ಲಾ ಸ್ಥಳೀಯ ಸಂಘಗಳೂ ಮನವಿ ಸಲ್ಲಿಸಬೇಕೆಂದು ನಿರ್ಧರಿಸಲಾಯಿತು.
ಏತನ್ಮಧ್ಯೆ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಆಡಳಿತ ಮಂಡಳಿಯ ಮೂಲಕ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಿದಾಗ ಅನ್ಯಾಯವನ್ನು ಸರಿಪಡಿಸುವ ಭರವಸೆ ದೊರೆತಿದೆ.
ದಿನಾಂಕ 12.08.2025ರ ನೋಟಿಫಿಕೇಷನ್ ಪ್ರಕಾರ ಕೇರಳ ಸರಕಾರವು ಕರಾಡ ಬ್ರಾಹ್ಮಣರನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅವರ ಪೈಕಿ ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ಸವಲತ್ತುಗಳ ಅರ್ಹತೆ ನೀಡಲು ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ಕರ್ನಾಟಕ ಮರೆತಿದೆ, ಇದನ್ನು ತುರ್ತಾಗಿ ಸರಿಪಡಿಸಬೇಕು ಎಂಬುದು ಕರಾಡ ಬ್ರಾಹ್ಮಣ ಸಮಾಜದ ಬೇಡಿಕೆಯಾಗಿದ್ದು, ಸರಿಪಡಿಸುವ ಭರವಸೆ ಇದೆ ಎನ್ನಲಾಗಿದ್ದು, ಸಭೆಯಲ್ಲಿ ಹಾಜರಿದ್ದು ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ಸಹಕರಿಸಿದ ಪದಾಧಿಕಾರಿಗಳು ಶ್ರಿಯುತರಾದ- ಹರೀಶ ಭಟ್ ಆಟಿಕುಕ್ಕೆ, ಸುಬ್ರಹ್ಮಣ್ಯ ಭಟ್ ಕುದ್ಕುಳಿ, ಚಂದ್ರಹಾಸ ಕನ್ನಡ್ಕ, ನಾಗರಾಜ ಉಪ್ಪಂಗಳ, ಪಾಂಡುರಂಗ ಗುರ್ಜರ್ ಶಿವಶಂಕರ ಭಟ್ ಕನ್ನಡ್ಕ, ಜಯರಾಮ ಕೋಮುಂಜೆ, ಪುರುಷೋತ್ತಮ ಭಟ್, ಸೀತಾ ಕಾಂತ್, ಅರವಿಂದ ಬಾಯಾರು, ಗಜಾನನ ರಾವ್, ರಘು ಸ್ವಾಧಿ ಕೊಪ್ಪ, ಮಹೇಶ್ ಘಾಟೆ, ರಾಮಚಂದ್ರ ಪಂಡಿತ್, ಚಂದ್ರಶೇಖರ ಭಟ್ ಗುಂಡ್ಯಡ್ಕ , ವಿಷ್ಣು ಭಟ್ ಬೆಂಗ್ರೋಡಿ , ಚಿದಂಬರ ಕಾನೇಟ್ಕರ್, ಮುಕುಂದ ಜಠಾರ ಹುಬ್ಬಳ್ಳಿ ಇವರುಗಳು ಸಭೆಯಲ್ಲಿದ್ದು ಪತ್ರ ಮುಖೇನ ಸಂಬಂಧ ಪಟ್ಟ ಆಯೋಗಕ್ಕೆ ವಿವರ ನೀಡಲಾಗಿದೆ ಎಂದು ಕೆ ಎಸ್ ಭಟ್ ಪತ್ರಿಕೆಗೆ ಮಾಹಿತಿಯನ್ನು ನೀಡಿದ್ದಾರೆ.
ವರದಿ: ಮಂದಾರ ರಾಜೇಶ್ ಭಟ್