ವರದಿ ಎಂ. ಆರ್.ಭಟ್
ಮೂಡುಬಿದಿರೆ : ಉಡುಪಿ-ಕಾಸರಗೋಡು 400 ಕೆ.ವಿ. ಪವರ್ ಲೈನ್ ಯೋಜನೆಗಾಗಿ ತಮ್ಮ ಕೃಷಿ ಭೂಮಿಯನ್ನು ತ್ಯಾಗ ಮಾಡಿದ ಸಂತ್ರಸ್ತ ರೈತರನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವೊಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲಿ ನಡೆಯಿತು.
ಪತ್ರಕರ್ತ ಹರೀಶ್ ಆದೂರು ಸಂಯೋಜನೆಯಲ್ಲಿ ‘ವರ್ಷ ಕ್ರಿಯೇಷನ್ಸ್’ ಪ್ರಸ್ತುತಿಯ ‘ಯಶಕರ್ನಾಟಕ’ ಸಮೂಹವು ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕೇಂದ್ರ ಸರ್ಕಾರದ ‘ವನ್ ಗ್ರಿಡ್ ವನ್ ನೇಷನ್’ ಯೋಜನೆಯ ಅನುಷ್ಠಾನಕ್ಕಾಗಿ, ತಲತಲಾಂತರಗಳಿಂದ ತಾವು ನಂಬಿಕೊಂಡಿದ್ದ ಕೃಷಿ ಭೂಮಿಯನ್ನು ರಾಷ್ಟ್ರದ ಪ್ರಗತಿಗಾಗಿ ಬಿಟ್ಟುಕೊಟ್ಟ ರೈತರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರೂ, ಅಭಿವೃದ್ಧಿಯ ಹಿತದೃಷ್ಟಿಯಿಂದ ಸಹಕರಿಸಿದ ಮಾದರಿ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೇವಲ ಸನ್ಮಾನಕ್ಕೆ ಸೀಮಿತವಾಗದ ಈ ಕಾರ್ಯಕ್ರಮದಲ್ಲಿ ನೆಲ-ಜಲದ ಸಂರಕ್ಷಣೆಗಾಗಿ ಹೋರಾಡಿದ ಮಹನೀಯರನ್ನೂ ನೆನೆಯಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ಕೃಷಿಕರ ಸವಾಲುಗಳ ಕುರಿತ ಉಪನ್ಯಾಸ ಹಾಗೂ ಸಂವಾದ ಗೋಷ್ಠಿಗಳು ರೈತರ ನೋವು-ನಲಿವುಗಳಿಗೆ ದನಿಯಾದವು.
ಕೃಷಿ ಕ್ಷೇತ್ರದ ಮುಂದಿರುವ ಪ್ರಸ್ತುತ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದವು. ಇಂತಹ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸಂತ್ರಸ್ತ ರೈತರು, ಹೋರಾಟಗಾರರು ಹಾಗೂ ಊರಿನ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಯೋಜನೆಯೊಂದರ ಹಿಂದೆ ಇರುವ ರೈತರ ತ್ಯಾಗವನ್ನು ಗುರುತಿಸಿದ ಈ ಪ್ರಯತ್ನವು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

