ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಶಾಲೆಯೊಂದು ತಂತ್ರಜ್ಞಾನದ ಬಳಕೆಯಲ್ಲಿ ಖಾಸಗಿ ಶಾಲೆಗಳಿಗೂ ಸವಾಲು ಹಾಕುವಂತಹ ಮಹತ್ತರ ಹೆಜ್ಜೆ ಇಟ್ಟಿದೆ. 111 ವರ್ಷಗಳ ಸುದೀರ್ಘ ಇತಿಹಾಸವಿರುವ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ‘ಜನರೇಟಿವ್ ಎಐ’ ತಂತ್ರಜ್ಞಾನ ಆಧಾರಿತ ರೋಬೋಟ್ (Robot) ಶಿಕ್ಷಕಿಯನ್ನು ಪರಿಚಯಿಸಲಾಗಿದೆ.
ಕರ್ನಾಟಕದ ಸರ್ಕಾರಿ ಶಾಲಾ ಇತಿಹಾಸದಲ್ಲಿ ಇದೊಂದು ವಿನೂತನ ಮತ್ತು ಕ್ರಾಂತಿಕಾರಿ ಪ್ರಯೋಗ ಎನಿಸಿಕೊಂಡಿದೆ. ನೀತಿ ಆಯೋಗದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ಮೇಕರ್ಸ್‌ಲ್ಯಾಬ್ ಎಜುಟೆಕ್ ಸಂಸ್ಥೆ ಈ ‘ಐರಿಸ್’ (IRIS) ಎಂಬ ರೋಬೋಟ್ ಅನ್ನು ಸಿದ್ಧಪಡಿಸಿದೆ. ಸೀರೆ ಧರಿಸಿದ ಮಾನವ ರೂಪದ ಈ ರೋಬೋಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದೆ.
ಈ ಹಿಂದೆ ಕೇರಳದ ತಿರುವನಂತಪುರದಲ್ಲಿ ಇಂತಹ ಪ್ರಯೋಗ ಯಶಸ್ವಿಯಾಗಿತ್ತು, ಈಗ ವಂಡ್ಸೆ ಶಾಲೆಯನ್ನು ದತ್ತು ಪಡೆದಿರುವ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್‌ನ ಸಹಕಾರದೊಂದಿಗೆ ನಮ್ಮ ರಾಜ್ಯದ ಸರ್ಕಾರಿ ಶಾಲೆಗೂ ಈ ತಂತ್ರಜ್ಞಾನ ಕಾಲಿಟ್ಟಿದೆ. ಸುಮಾರು 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರೋಬೋಟ್ ಅನ್ನು ಅಳವಡಿಸಲಾಗಿದ್ದು, ಇದು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಬಲ್ಲದು.
ಈ ಬಗ್ಗೆ ಮಾಹಿತಿ ನೀಡಿರುವ ಟ್ರಸ್ಟ್‌ನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಅವರು, ಈ ರೋಬೋಟ್ ಶಿಕ್ಷಕರಿಗೆ ಪರ್ಯಾಯವಲ್ಲ ಬದಲಾಗಿ ಬೋಧನೆಯಲ್ಲಿ ಅವರಿಗೆ ನೆರವಾಗುವ ಒಂದು ಅತ್ಯಾಧುನಿಕ ಸಾಧನವಾಗಿದೆ ಎಂದು ತಿಳಿಸಿದ್ದಾರೆ.
ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬರಲಿದೆ. ರೋಬೋಟ್ ಸರಿಯಾಗಿ ಕಾರ್ಯನಿರ್ವಹಿಸಲು ಗುಣಮಟ್ಟದ ಇಂಟರ್ನೆಟ್ ಮತ್ತು ನಿರಂತರ ವಿದ್ಯುತ್ ಪೂರೈಕೆಯ ವ್ಯವಸ್ಥೆಯನ್ನು ಶಾಲೆಯಲ್ಲಿ ಮಾಡಲಾಗಿದೆ.
ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿಯಲ್ಲಿದ್ದ ಈ ಶಾಲೆಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸುಮಾರು 3 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಹೊಸ ಜೀವ ನೀಡಿದೆ. ಶಾಲೆಯಲ್ಲಿ ಸ್ಮಾರ್ಟ್ ಇಂಟರಾಕ್ಟಿವ್ ಬೋರ್ಡ್‌ಗಳು, ಕಂಪ್ಯೂಟರ್ ಲ್ಯಾಬ್, ಪ್ರೊಜೆಕ್ಟರ್ ಹಾಗೂ ಸೌರ ವಿದ್ಯುತ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದ ನಂತರ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡಿದೆ. ಪ್ರಸ್ತುತ 1 ರಿಂದ 7ನೇ ತರಗತಿವರೆಗೆ 334 ವಿದ್ಯಾರ್ಥಿಗಳು ಓದುತ್ತಿದ್ದು, ಈ ಎಐ ಶಿಕ್ಷಕಿಯ ಆಗಮನದ ನಂತರ ಪೋಷಕರಲ್ಲಿ ಶಾಲೆಯ ಬಗ್ಗೆ ಕುತೂಹಲ ಮತ್ತು ದಾಖಲಾತಿ ವಿಚಾರಣೆಗಳು ಇನ್ನುಷ್ಟು ಹೆಚ್ಚಾಗಿವೆ ಎನ್ನಲಾಗಿದೆ.

