ಇಂದಿನ ಆಧುನಿಕ ಯುಗದಲ್ಲಿ ಫ್ಯಾಷನ್ ಡಿಸೈನ್ ಕೋರ್ಸ್ಗೆ ವಿಶೇಷ ಮಹತ್ವವಿದೆ. ಇದು ಕೇವಲ ಉಡುಪು ವಿನ್ಯಾಸಕ್ಕೆ ಮಾತ್ರ ಸೀಮಿತವಾಗದೇ, ಸೃಜನಾತ್ಮಕತೆ, ಆತ್ಮವಿಶ್ವಾಸ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಪ್ರಮುಖ ಕ್ಷೇತ್ರವಾಗಿದೆ.
ಈ ಹಿನ್ನೆಲೆ, ವಿದ್ಯಾರ್ಥಿಗಳಲ್ಲಿ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಅಕ್ಷಯ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಫ್ಯಾಷನ್ ಡಿಸೈನ್ ಅಸೋಸಿಯೇಷನ್ ವತಿಯಿಂದ ಒಂದು ದಿನದ “Runway Skill” ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಲಾಯಿತು.

ಪಾಥ್ವೇ ಮೋಡಲಿಂಗ್ ಸ್ಟುಡಿಯೋ, ಮಂಗಳೂರು ಇದರ ಸಂಸ್ಥಾಪಕರಾದ ದೀಪಕ್ ಗಂಗೂಲಿ ಅವರು ಮೋಡಲಿಂಗ್ ಕುರಿತು ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು ವಿದ್ಯಾರ್ಥಿಗಳಿಗೆ ಈ ತರಬೇತಿ ಜೀವನದಲ್ಲಿ ಯಶಸ್ಸು ತಂದುಕೊಡಲಿ ಎಂದು ಆಶಿಸಿದರು. ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ ಅವರು ಮೋಡಲಿಂಗ್ನ ಉಪಯೋಗ ಮತ್ತು ಅವಕಾಶಗಳ ಬಗ್ಗೆ ವಿವರಿಸಿದರು.
ದೀಪಕ್ ಗಂಗೂಲಿ ಅವರೊಂದಿಗೆ ಐದು ಮಂದಿ ಮೋಡಲ್ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದು ಪ್ರಮಾಣಪತ್ರಗಳನ್ನು ಪಡೆದರು.
ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಡಾ. ಅಕ್ಷಯ್, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ.ಎ., ಶೈಕ್ಷಣಿಕ ನಿರ್ದೇಶಕರಾದ ಅಭಿಲಾಶ್ ಕ್ಷತ್ರಿಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾರತ್ನ, IQAC ನಿರ್ದೇಶಕಿ ರಶ್ಮಿ ಕೆ., ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥೆ ವೀಣಾ ಬಿ.ಕೆ., ಫ್ಯಾಷನ್ ಡಿಸೈನ್ ಅಸೋಸಿಯೇಷನ್ ನಿರ್ದೇಶಕಿ ಕು. ಧನ್ಯ ಶ್ರೀ ಹಾಗೂ ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾರ್ಥಿನಿ ಕು. ಜೆನಿಫರ್ ಡಿಸೋಜಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯಾದ ಕು. ಪ್ರಕೃತಿ ಪ್ರಾರ್ಥನೆ ಹಾಡಿದರು. ಉಪನ್ಯಾಸಕರಾದ ಕು. ಶೈಲ ಶ್ರೀ ವಿ.ಎಸ್. ಹಾಗೂ ವಿದ್ಯಾರ್ಥಿಯಾದ ಮಿಲನ್ ವಂದಿಸಿದರು. ವಿದ್ಯಾರ್ಥಿನಿಯರಾದ ಕು. ಹಲೀಮಾ ಮುಸ್ಕಾನ್ ಮತ್ತು ರಿಜೋನಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು.

