ಎಸ್.ಎನ್. ಮೂಡಬಿದ್ರಿ ಪಾಲಿಟೆಕ್ನಿಕ್‌ನಲ್ಲಿ ಪ್ರೇರಣಾದಾಯಕ ಉಪನ್ಯಾಸ

0
12

ಮೂಡಬಿದ್ರೆಯ ಎಸ್.ಎನ್. ಎಂ ಪಾಲಿಟೆಕ್ನಿಕ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆರೈವಾ ಸಿವಿಲ್ ಕ್ಲಬ್ ವತಿಯಿಂದ “ಡಿಜಿಟಲ್ ಯುಗದಲ್ಲಿ ಗಮನಶಕ್ತಿ, ಸ್ಮರಣಶಕ್ತಿ ಮತ್ತು ಯಶಸ್ಸು” ಎಂಬ ವಿಷಯದ ಮೇಲೆ ಪ್ರೇರಣಾದಾಯಕ ಉಪನ್ಯಾಸವನ್ನು ಆಯೋಜಿಸಲಾಯಿತು. ಕಾರ್ಯಕ್ರಮವು ಎಸ್‌ಎನ್‌ಎಂಪಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ.ಎಸ್. ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆಯ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಹಾಗೂ ಯುವ ರೆಡ್ ಕ್ರಾಸ್ ಅಧಿಕಾರಿ ಶ್ರೀಗೌರಿ ಕೆ. ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅತಿಥಿಯಾಗಿ ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ದಿವ್ಯಾ ಶೆಣೈ ಅವರು ಉಪಸ್ಥಿತರಿದ್ದರು.

ಉಪನ್ಯಾಸದಲ್ಲಿ ಡಿಜಿಟಲ್ ಯುಗದಲ್ಲಿ ಗಮನ ಕೇಂದ್ರೀಕರಣದ ಮಹತ್ವ, ಸ್ಮರಣಶಕ್ತಿ ವೃದ್ಧಿಸುವ ಸರಳ ತಂತ್ರಗಳು ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಮನೋಭಾವಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿವರಿಸಿದರು.

ಉಪನ್ಯಾಸದ ವಿಶೇಷತೆಯಾಗಿ ವಿವಿಧ ಚಟುವಟಿಕೆಗಳು, ಪ್ರಶ್ನೋತ್ತರ ಹಾಗೂ ನೈಜ ಜೀವನದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಯಿತು. ಇದರಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಪ್ರೇರಣೆ ಹಾಗೂ ಆತ್ಮವಿಶ್ವಾಸವನ್ನು ಪಡೆದುಕೊಂಡರು.

ಪ್ರಾರ್ಥನೆಯನ್ನು ಸೌಮ್ಯಾ ಮತ್ತು ಪ್ರಣಮ್ಯಾ, ಅತಿಥಿ ಪರಿಚಯವನ್ನು ಉದಯರಾಜ್, ಸ್ವಾಗತ ಭಾಷಣವನ್ನು ದೀಪಿಕಾ, ಹಾಗೂ ವಂದನಾರ್ಪಣೆಯನ್ನು ಪ್ರಜ್ವಲ್ ಅವರು ನೆರವೇರಿಸಿದರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ದೀಕ್ಷಿತಾ ಅವರು ನಡೆಸಿಕೊಟ್ಟರು. ಸಿವಿಲ್ ಕ್ಲಬ್ ಸಂಯೋಜಕಿ ಸುಪ್ರಿಯಾ ಎಸ್. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಸಿವಿಲ್ ಹಾಗೂ ಮೆಕಾಟ್ರಾನಿಕ್ಸ್ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಪ್ರೇರಣಾದಾಯಕ ಉಪನ್ಯಾಸವು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಗೆ ಮಹತ್ವದ ದಿಕ್ಕು ತೋರಿಸಿತು.

LEAVE A REPLY

Please enter your comment!
Please enter your name here