ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು ದುಬೈ ಮಾರ್ಗವಾಗಿ ಎರಡನೇ ವಿಶೇಷ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಯಶಸ್ವಿಯಾಗಿ ಬಂದಿಳಿದಿದ್ದು, ಒಟ್ಟು 490 ಪ್ರಯಾಣಿಕರು ಸುರಕ್ಷಿತವಾಗಿ ನಾಡಿಗೆ ಮರಳಿದ್ದಾರೆ.
ಈ ವಿಮಾನದಲ್ಲಿ ಜೆಡಿಎಸ್ ಎಂಎಲ್ ಸಿ ಎಸ್.ಎಲ್. ಭೋಜೇಗೌಡ ಹಾಗೂ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೇರಿದಂತೆ ಹಲವು ಪ್ರಮುಖರು ಬೆಂಗಳೂರಿಗೆ ಆಗಮಿಸಿದ್ದಾರೆ. ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದ್ದರು. ಇದೀಗ ಎರಡನೇ ವಿಮಾನದಲ್ಲಿ ದಾಖಲೆ ಸಂಖ್ಯೆಯ 490 ಜನರು ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಭಾವನಾತ್ಮಕ ಕ್ಷಣಗಳು ಕಂಡುಬಂದವು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ಹಾಗೂ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯ್ನಾಡಿಗೆ ಮರಳಿದ ಪ್ರಯಾಣಿಕರ ಮುಖದಲ್ಲಿ ಆತಂಕದ ನಡುವೆಯೂ ನೆಮ್ಮದಿಯ ನಗು ಎದ್ದು ಕಾಣುತ್ತಿತ್ತು.

