ಕುಣಿಯ (ಕಾಸರಗೋಡು): ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಶತಾಬ್ದಿ ಅಂತರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ನೂರಾರು ಅದ್ಭುತಗಳನ್ನೊಳಗೊಂಡ ‘ಗ್ಲೋಬಲ್ ಎಕ್ಸ್‌ಪೋ’ಗೆ ಕಾಸರಗೋಡಿನ ಕುಣಿಯದಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಪ್ರದರ್ಶನವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಡ್ರೋನ್ ಮೂಲಕ ಟಿಕೆಟ್ ತಲುಪಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು.
ಐದು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಎಕ್ಸ್‌ಪೋ ನಗರಿಯಲ್ಲಿ ಸಮಸ್ತದ ನೂರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಸಾರುವ ಹತ್ತು ಬೃಹತ್ ಪೆವಿಲಿಯನ್‌ಗಳನ್ನು ನಿರ್ಮಿಸಲಾಗಿದೆ. ಇಂದು ಮತ್ತು ನಾಳೆ ಮಹಿಳೆಯರಿಗೆ ಮಾತ್ರ ಪ್ರವೇಶವಿರುತ್ತದೆ. ಫೆಬ್ರವರಿ 2 ರಿಂದ 8 ರವರೆಗೆ ಪುರುಷರಿಗೆ ಪ್ರವೇಶಾವಕಾಶ ನೀಡಲಾಗಿದೆ. ಕೇರಳದ ಸಾಂಪ್ರದಾಯಿಕ ಶೈಲಿಯ ಓತುಪಳ್ಳಿಗಳು, ದರ್ಸ್ ಮತ್ತು ಮದ್ರಸಾಗಳ ಶಿಕ್ಷಣ ವ್ಯವಸ್ಥೆಯ ಪರಿಚಯ, ಆಧ್ಯಾತ್ಮಿಕ ಮತ್ತು ಆಚರಣೆಗಳ ಒಳನೋಟಗಳನ್ನು ಇಲ್ಲಿ ನೀಡಲಾಗಿದೆ. ಇಸ್ಲಾಮಿಕ್ ಕರ್ಮಶಾಸ್ತ್ರ ಗ್ರಂಥ ‘ಫತ್ಹುಲ್ ಮುಈನ್’ ವಿವರಿಸುವ ಎ.ಐ (AI) ಉಸ್ತಾದ್, ಕ್ಯಾಲಿಗ್ರಫಿ ಕಲೆ ಮತ್ತು ಮಕ್ಕಳಿಗಾಗಿ ಜ್ಞಾನಯುತ ಪ್ರದರ್ಶನಗಳು ಇಲ್ಲಿನ ವಿಶೇಷತೆಗಳಾಗಿವೆ.
ಪ್ರದರ್ಶನದ ಜೊತೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಅಂತರಾಷ್ಟ್ರೀಯ ಮಟ್ಟದ ಸಂವಾದಗಳು, ಬುರ್ದಾ ಮಜ್ಲಿಸ್, ದಫ್ ಮುಟ್ಟು, ಗಜಲ್, ದೀಪ್ ರಾತೀಬ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಖಾಜಿ ಮುಹಮ್ಮದ್ ಸ್ಕ್ವೇರ್‌ನಲ್ಲಿ ನಡೆಯಲಿವೆ. ಫೆಬ್ರವರಿ 4 ರಿಂದ 8 ರವರೆಗೆ ಸಮಸ್ತ ಶತಾಬ್ದಿ ಅಂತರಾಷ್ಟ್ರೀಯ ಮಹಾಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಬಿಖ್ ಅಲಿ ಶಿಹಾಬ್ ತಂಙಳ್, ಅಬ್ದುಸ್ಸಲಾಮ್ ದಾರಿಮಿ ಆಲಂಪಾಡಿ ಸೇರಿದಂತೆ ಅನೇಕ ಉಲಮಾಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

