ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ. ಡಿ.ಕೆ. ಚೌಟ ದತ್ತಿನಿಧಿಯಿಂದ ಪ್ರತಿವರ್ಷವೂ ನೀಡುವ ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಭಾಜನರಾಗಿದ್ದಾರೆ ಎಂದು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ
ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಗೋಣಿಬೀಡಿನಲ್ಲಿ ಜನಿಸಿದ ಸಂಜಯ ಕುಮಾರ್ ಶೆಟ್ಟಿ ಅವರು ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ದಿ. ಪಡ್ರೆ ಚಂದು ಅವರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿ, ಕೋಳ್ಯೂರು ರಾಮಚಂದ್ರರಾವ್ ಮತ್ತು ಎಂ.ಕೆ. ರಮೇಶಾಚಾರ್ಯರ ಮಾರ್ಗದರ್ಶನದಲ್ಲಿ ಉತ್ತಮ ಸ್ತ್ರೀ ಪಾತ್ರಧಾರಿಯಾಗಿ ರೂಪುಗೊಂಡರು.
ಐದು ದಶಕಗಳಿಂದ ಪುತ್ತೂರು, ಸುರತ್ಕಲ್, ಕರ್ನಾಟಕ, ಗಣೇಶಪುರ, ಮಂಗಳಾದೇವಿ, ಕುಂಟಾರು, ಎಡನೀರು, ಹೊಸನಗರ, ಬಪ್ಪನಾಡು, ಕೊಲ್ಲಂಗಾನ, ಮಲ್ಲ, ಬಾಚಕೆರೆ ಮುಂತಾದ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾ ಸೇವೆ ಮಾಡಿದ್ದಾರೆ. ಶ್ರೀದೇವಿ, ದ್ರೌಪದಿ, ದಮಯಂತಿ, ಸುಭದ್ರೆ, ಸೀತೆ, ದಾಕ್ಷಾಯಿಣಿ, ಅಂಬೆ, ಚಿತ್ರಾಂಗದೆ, ಕಯಾದು, ಮೋಹಿನಿ, ಮೇನಕೆ, ತ್ರಿಲೋಕ ಸುಂದರಿ, ಸ್ವೈರಿಣಿ ಮೊದಲಾದವು ಅವರಿಗೆ ಹೆಸರು ತಂದ ಸ್ತ್ರೀಪಾತ್ರಗಳು.
ತುಳು ಪ್ರಸಂಗಗಳಲ್ಲಿ ಕಿನ್ನಿದಾರು, ಸಿರಿ, ಸೋಮಲಾದೇವಿ, ಕಚ್ಚೂರ ಮಾಲ್ದಿ, ಗೆಜ್ಜೆ ಪೂಜೆಯ ತುಳಸಿ, ಎಲ್ಲೂರ ಮಲ್ಲಿ, ಕಾಡಮಲ್ಲಿಗೆಯ ತುಂಗೆ, ನಾಡ ಕೇದಗೆ, ನೀಲಾಂಬರಿ, ಸಿರಿ ಬಾಲೆ, ಪಲ್ಲವಿ, ಶ್ರೀಮತಿ ಅಲ್ಲದೆ ಶ್ರೀರಾಮ, ಶ್ರೀಕೃಷ್ಣ, ಲಕ್ಷ್ಮಣ, ಅಯ್ಯಪ್ಪ, ಪರಶುರಾಮ, ಮನ್ಮಥ, ಸೇರಿದಂತೆ ಪೌರಾಣಿಕ ಮತ್ತು ಚಾರಿತ್ರಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ, ಉಡುಪಿ ಯಕ್ಷಗಾನ ಕಲಾರಂಗ, ಸ್ವಸ್ತಿಸಿರಿ, ರೋಟರಿ, ಅರುವ ಪ್ರತಿಷ್ಠಾನ, ಕದ್ರಿ ಹವ್ಯಾಸಿ ಬಳಗ, ಒಡಿಯೂರು ಗುರುದೇವಾನಂದ ಪ್ರಶಸ್ತಿಗಳಲ್ಲದೆ, ಬೋಳಾರ, ಪುಳಿಂಚ, ಶೇಣಿ ಜನ್ಮ ಶತಮಾನೋತ್ಸವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪಾತಾಳ – ಯಕ್ಷ ಮಂಗಳ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಸಂಘ ಸಂಸ್ಥೆ ಗಳಿಂದ ಗೌರವಿಸಲ್ಪಟ್ಟಿದ್ದಾರೆ. ಮುಂಬೈ ,ಮಸ್ಕತ್, ಬೆಹರಿನ್, ದುಬೈ ಮೊದಲಾದ ಹೊರನಾಡುಗಳಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವ ಗೋಣಿಬೀಡು ಅವರಿಗೆ ಯಕ್ಷರಂಗದ ಚಿರಕನ್ನಿಕೆ, ಯಕ್ಷ ಮಿನುಗುತಾರೆ, ಯಕ್ಷ ಮಣಿಮೇಖಲಾ, ಯಕ್ಷ ಮಯೂರಿ, ಯಕ್ಷ ನಂದಿನಿ, ಯಕ್ಷ ನಾಟ್ಯ ಲಲಿತೆ ಮೊದಲಾದ ಬಿರುದುಗಳು ಅವರಿಗೆ ಸಂದಿವೆ.
ಸುಮಾರು 500ಕ್ಕೂ ಮಿಕ್ಕಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಯಕ್ಷ ಯಾನದ ಸುವರ್ಣ ಸಂಭ್ರಮದಲ್ಲಿದ್ದಾರೆ.
ಇದೇ ಆ.23ರಂದು ಮಂಗಳೂರಿನಲ್ಲಿ ನಡೆಯುವ ವಿಶ್ವ ಬಂಟ ಪ್ರತಿಷ್ಠಾನದ ಮಹಾಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಎಂದು ನಮ್ಮ ವರದಿಗಾರರೊಂದಿಗೆ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವರದಿ: ಮಂದಾರ ರಾಜೇಶ್ ಭಟ್