ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ
ಮೂಡುಬಿದಿರೆ: ನಮ್ಮ ಭಾರತೀಯ ಸಂಸ್ಕೃತಿಯ ಗಾಢವಾದ ಬೇರು ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ನಾಡಿನ ಸಂಸ್ಕೃತಿ, ತತ್ತ್ವ ರ‍್ಮ, ಸಾಹಿತ್ಯ, ಕಲೆ ಮತ್ತು ಜ್ಞಾನದ ನಿರಂತರ ಪ್ರಕಾಶ. ಇಂದು ನಾವು ಕಾಣುತ್ತಿರುವ ಜೀವನಮೌಲ್ಯಗಳು, ಶಿಷ್ಟಾಚಾರಗಳು, ಶ್ರೀಮಂತ ಕಲೆಗಳು, ಜ್ಞಾನದ ಹರವುಗಳೆಲ್ಲ ಸಂಸ್ಕೃತ ಸಾಹಿತ್ಯದಲ್ಲಿ ನೆಲೆ ನಿಂತಿವೆ. ಸಂಸ್ಕೃತ ಅಧ್ಯಯನ ಮಾಡಿದರೆ ನಾವೇ ನಮ್ಮ ಮೂಲಗಳಿಗೆ ಹತ್ತಿರವಾಗುತ್ತೇವೆ, ಜಗತ್ತಿನೊಂದಿಗೆ ನಿಂತು ಮಾತನಾಡುವ ಶಕ್ತಿಯನ್ನು ಪಡೆಯುತ್ತೇವೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಅಭಿಪ್ರಾಯಪಟ್ಟರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪರ‍್ವ ಸಂಸ್ಕೃತ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪರ‍್ವ ಪ್ರಾಂಶುಪಾಲರ ಸಂಘ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ವಾಂಸರು ಮಂಗಳೂರಿನ ವಾಸುದೇವ ಕಾರಂತರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ೧೦೦ ಅಂಕ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಡಾ. ಪ್ರಸನ್ನ ಕುಮಾರ್ ಐತಾಳ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ತೇಜಸ್ವಿ ಭಟ್ ನಿರೂಪಿಸಿ, ಸಂಘದ ಕಾರ್ಯದರ್ಶಿ ಡಾ. ಮಧುಕೇಶ್ವರ ಶಾಸ್ತ್ರೀ ವಂದಿಸಿದರು.

