ಮಂಗಳೂರು : ನಾಡು-ನುಡಿ, ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಭಾಸ್ಕರ್ ರೈ ಕುಕ್ಕುವಳ್ಳಿ ಅವರು ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ರಾಜ್ಯ ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ಲೋಕದ ಅಪ್ರತಿಮ ಸಾಧಕ ಭಾಸ್ಕರ್ ರೈ ಕುಕ್ಕುವಳ್ಳಿ ಅವರು ಸಾಹಿತ್ಯ ಮತ್ತು ಕಲೆಯ ವಿವಿಧ ಆಯಾಮಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ .
ಸವ್ಯಸಾಚಿ ಲೇಖಕ ಇವರು ಸಾಹಿತ್ಯ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಹಲವಾರು ಮೌಲಿಕ ಪುಸ್ತಕಗಳನ್ನು ರಚಿಸಿರುವ ಇವರು, ಕವಿತೆಗಳ ಮೂಲಕ ಜನಸಾಮಾನ್ಯರ ಮನ ತಲುಪಿದ್ದಾರೆ. ಇವರ ಬರಹಗಳು ನಾಡಿನ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿವೆ.
ಯಕ್ಷಗಾನದ ಮೇರು ಕಲಾವಿದ: ಯಕ್ಷಗಾನ ರಂಗದ ಖ್ಯಾತ ಅರ್ಥದಾರಿಗಳಾಗಿ, ಪ್ರಸಂಗಕರ್ತರಾಗಿ ಅವರು ಮಾಡಿರುವ ಸೇವೆ ಅನನ್ಯ. ಕಲೆಯ ಮೂಲಕ ಸಂಸ್ಕಾರವನ್ನು ಪಸರಿಸುವಲ್ಲಿ ಇವರ ಪಾತ್ರ ದೊಡ್ಡದು.
ಜಾಗತಿಕ ಸಾಂಸ್ಕೃತಿಕ ರಾಯಭಾರಿ : ಕನ್ನಡದ ಕಂಪನ್ನು ಪಸರಿಸಲು ದೇಶ-ವಿದೇಶಗಳಲ್ಲಿ ಸಂಚರಿಸಿರುವ ಇವರು, ಹೊರನಾಡಿನಲ್ಲೂ ಕನ್ನಡದ ಜ್ಯೋತಿಯನ್ನು ಬೆಳಗಿಸಿದ್ದಾರೆ.

