ರಾಜಸ್ಥಾನ: ಇಂದು ಬೆಳ್ಳಂಬೆಳಗ್ಗೆ ಎಂದಿನಂತೆ ಶಾಲೆಗೆ ಹೋದ ಮಕ್ಕಳಿಗೆ ಯಮರಾಯ ಏಕಾಏಕಿ ಬಂದು ಎರಗಿದ್ದಾನೆ. ಬೆಳಗ್ಗೆ 8.30ರ ಸುಮಾರಿಗೆ ಶಾಲಾ ಪ್ರಾರಂಭವಾದ ಕೆಲ ಹೊತ್ತಿನಲ್ಲೇ ಶಾಲಾ ಮೇಲ್ಛಾವಣಿ ಸಮೇತ ಕಟ್ಟಡ ಕುಸಿದು ಬಿದ್ದು ಭಾರೀ ಅನಾಹುತ ಸಂಭವಿಸಿದೆ. ಈ ಅವಘಡದಲ್ಲಿ ಕನಿಷ್ಠ ನಾಲ್ವರು ಮಕ್ಕಳು ಸಾವನಪ್ಪಿದ್ದಾರೆ. ಇನ್ನೂ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿ ಒದ್ದಾಡುತ್ತಿದ್ದು ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.
ರಾಜಸ್ಥಾನದ ಝಲಾವರ್ ಜಿಲ್ಲೆಯ ಪಿಪ್ಲೋಡಿ ಗ್ರಾಮದ ರಾಜಕೀಯ ಉನ್ನತ ಪ್ರಾಥಮಿಕ ಶಾಲೆಯ ಛಾವಣಿ ಇಂದು ಬೆಳಿಗ್ಗೆ ಕುಸಿದು ಬಿದ್ದಿದೆ. ಇಲ್ಲಿವರೆಗೂ ಕನಿಷ್ಠ ನಾಲ್ಕು ಮಕ್ಕಳು ಮೃತಪಟ್ಟಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶಾಲಾ ಕಟ್ಟಡ ಕುಸಿದು ಭಾರೀ ಅನಾಹುತ!
ಶಾಲಾ ಕಟ್ಟಡ ಕುಸಿದು ಬಿದ್ದ ದುರ್ಘಟನೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡು ಒದ್ದಾಡಿದ್ದಾರೆ. ಈ ವೇಳೆ ಸ್ಥಳೀಯ ಗ್ರಾಮಸ್ಥರು, ಶಿಕ್ಷಕರು, ಮತ್ತು ರಕ್ಷಣಾ ತಂಡಗಳು ಜೆಸಿಬಿ ಯಂತ್ರಗಳ ಸಹಾಯದಿಂದ ತೀವ್ರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಗೊಂಡ ಮಕ್ಕಳನ್ನು ಮನೋಹರ್ ಥಾಣಾ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ತುರ್ತು ಚಿಕಿತ್ಸೆಗಾಗಿ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಮಕ್ಕಳು ಪ್ರಾರ್ಥನೆ ಮಾಡುವಾಗಲೇ ಕಟ್ಟಡ ಕುಸಿತ!
ಈ ಘಟನೆ ಶುಕ್ರವಾರ ಬೆಳಿಗ್ಗೆ 8:30 ರ ಸುಮಾರಿಗೆ ಅಂದರೆ ಶಾಲೆಯ ದಿನಚರಿ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸಂಭವಿಸಿದೆ. ಶಾಲಾ ಕಟ್ಟಡವು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತೀಚಿನ ಭಾರೀ ಮಳೆಯಿಂದಾಗಿ ಕಟ್ಟಡದ ರಚನಾತ್ಮಕ ಗುಣಮಟ್ಟವು ಇನ್ನಷ್ಟು ಹದಗೆಟ್ಟಿತ್ತು. ಮಕ್ಕಳು ತರಗತಿಗಳಲ್ಲಿ ಅಥವಾ ಪ್ರಾರ್ಥನಾ ಸಭೆಯಲ್ಲಿ ಇದ್ದಾಗ ಛಾವಣಿಯು ಇದ್ದಕ್ಕಿದ್ದಂತೆ ಕುಸಿದು, ಧೂಳು ಮತ್ತು ಶಿಥಿಲಗಳಿಂದ ಶಾಲಾ ಆವರಣವು ಆವೃತವಾಯಿತು.