ಎಸ್.ಡಿ.ಎಂ ಕಾಲೇಜು : ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭ

0
7

ಸಾಹಿತ್ಯ ಮಾನವೀಯ ಮೌಲ್ಯಗಳ ಸಾರುತ್ತದೆ : ಶ್ರೀಧರ್ ಭಟ್

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯ ಹಿಂದಿ ವಿಭಾಗದ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ‘ವರ್ತಮಾನದಲ್ಲಿ ಭಕ್ತಿಕಾಲೀನ ಹಿಂದಿ ಸಾಹಿತ್ಯದ ಪ್ರಸ್ತುತತೆ’ ವಿಚಾರದ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಆಡಳಿತ ಕುಲಸಚಿವ ಪ್ರೊ. ಶ್ರೀಧರ ಎನ್. ಭಟ್ ಮಾತನಾಡಿ, ಜಾತಿ ಧರ್ಮ, ಮಥ ಪಂಥಗಳನ್ನು ಮೀರಿ ನಿಲ್ಲುವ ನೌತಿಕ ಶಕ್ತಿ ಸಾಹಿತ್ಯಕಿದೆ. ಭಕ್ತಿ ಕಾಲದ ಹಿಂದಿ ಸಾಹಿತ್ಯದಲ್ಲಿ ಸಂತ ಕಬೀರ್, ಗುರು ನಾನಕ್, ತುಳಸಿ ದಾಸ್ ರಂತಹ ಮಹನೀಯರು ಧಾರ್ಮಿಕ ಶ್ರದ್ಧೆ, ಸಾಮಾಜಿಕ ಪ್ರಗತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಚಿಂತನೆಯನ್ನು ಬೋಧಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹರಿಹರದ ಎಸ್.ಜೆ.ವಿ.ಪಿ. ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಮೇಶ್ ಕೆ. ಪರ್ವತಿ ಮಾತನಾಡಿ, ಸಾಹಿತ್ಯಗಳು ಸಾಮಾಜಿಕ ಜಾಗೃತಿ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು. ಮೈಸೂರಿನ ಸೇಂಟ್ ಫಿಲೋಮೆನಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಉಮೇಶ್ ಮಾತನಾಡಿದರು. ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾ ಭವನದಲ್ಲಿ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಷನ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಪ್ರೊ. ಶಶಿಶೇಖರ್ ಎನ್. ಕಾಕತ್ಕರ್   ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

ವಿಚಾರ ಸಂಕಿರಣದ ಮೊದಲಾರ್ಧದಲ್ಲಿ ಭಕ್ತಿಕಾಲೀನ ಹಿಂದಿ ಸಾಹಿತ್ಯ ಕುರಿತು ಕೇರಳದ ಕಾಸರಗೋಡು ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ತಾರು ಎಸ್. ಪವಾರ  ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸೋಲಾಪುರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಂಶೋಧನಾ ನಿರ್ದೇಶಕ ಪ್ರೊ. ರವಿರಾಜ ಫುರಡೆ ‘ ಸಂತ ಕಬೀರರ ಸಾಹಿತ್ಯವು ಭಾರತೀಯ ಜನಜೀವನದ ಮೇಲೆ ಬೀರಿದ ಸಕಾರಾತ್ಮಕ ಪ್ರಭಾವ , ಮೂಡಬಿದ್ರೆಯ ಆಳ್ವಾಸ್  ಮಹಾವಿದ್ಯಾಲಯ ಹಿಂದಿ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರಯ ಹೆಗಡೆ ‘ವ್ಯಕ್ತಿತ್ವ ನಿರ್ಮಾಣದ ಮೂಲಗಳು – ಭಕ್ತಿಕಾವ್ಯ (ಕಬೀರರ ಪರಿಪ್ರೇಕ್ಷ್ಯದಲ್ಲಿ), ಸುಳ್ಳ್ಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಕೆ. ಎಸ್. ‘ವೃಂದರ ದೋಹಾಗಳಲ್ಲಿ ಅಡಗಿರುವ ಜನಹಿತ ಹಾಗೂ ರಾಷ್ಟ್ರಹಿತದ ಭಾವನೆ – ಆಧುನಿಕ ಸಂದರ್ಭದಲ್ಲಿನ ಮಹತ್ವ ಕುರಿತು ವಿಚಾರ ಮಂಡನೆ ಮಾಡಿದರು.

ಇದೇ ವೇಳೆ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳ ಪ್ರಸ್ತುತಪಡಿಸಿದರು. ಇದರ ಅಧ್ಯಕ್ಷತೆಯನ್ನು ಧಾರವಾಡದ ಕಿಟೆಲ್ ಕಲಾ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕವಿತಾ ಚಂದಗುಡೆ ನಡೆಸಿಕೊಟ್ಟರು.

ದ್ವಿತೀಯಾರ್ಧದಲ್ಲಿ ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ನಾಮದೇವ್ ಗೌಡ ‘ದಕ್ಷಿಣ ಭಾರತದ ಭಕ್ತಿಕಾವ್ಯ’ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನಾ ಸಿ. ‘ಕಬೀರ ಮತ್ತು ತುಕಾರಾಮರ ದಾರ್ಶನಿಕ ವಿಚಾರಗಳು’ , ಧಾರವಾಡ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ನಾಯಕ್ ‘ಕನ್ನಡ ಶರಣ ಸಾಹಿತ್ಯ ಮತ್ತು ಹಿಂದಿ ಭಕ್ತಿಕಾವ್ಯ’ , ಮಹಾರಾಷ್ಟ್ರದ ಸಿಂಹಗಡ ಕ್ಯಾಂಪಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಫೀಕ್ ಎನ್. ನದಾಫ್ ‘ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶಿಕ್ಷಣದಲ್ಲಿ ಭಕ್ತಿಕಾವ್ಯದ ಪಾತ್ರ’ ಕುರಿತು ವಿಚಾರವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ರಿಜಿಸ್ಟ್ರಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಭಟ್‌, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯ್ಕ್ ಹಾಗು ಐಕ್ಯುಎಸಿ ಸಂಯೋಜಕ ಗಜಾನನ ಭಟ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್ ಸ್ವಾಗತಿಸಿ, ಉಪನ್ಯಾಸಕಿ ಶೃತಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

– ಪ್ರೋ. ವಿಶ್ವನಾಥ್ ಪಿ, ಎಸ್.ಡಿ.ಎಂ (ಸ್ವಾಯತ್ತ) ಪದವಿ ಕಾಲೇಜು ಪ್ರಾಂಶುಪಾಲರು : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಬುದ್ಧತೆಯನ್ನು ಹೆಚ್ಚಿಸಲು ಸಾಹಿತ್ಯಾದರಿತ ವಿಚಾರ ಮಂಥನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಇಂದು ಕಾಲೇಜಿನಲ್ಲಿ ಹಿಂದಿ ಸಾಹಿತ್ಯದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಹೊಸ ಬೆಳಕನ್ನು ಚೆಲ್ಲುವುದ ಜೊತೆಗೆ ಸಮಾಜ ಮತ್ತು ಸಮುದಾಯಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.

‘ ಕಾರ್ಯತಃ ಅರ್ಥಾತ್ ಧರ್ಮ ನಗರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಉಜಿರೆಯ ಈ  ಶಿಕ್ಷಣ ಸಂಸ್ಥೆಯಲ್ಲಿ ಭಕ್ತಿ ಕಾಲದ ಹಿಂದಿ ಸಾಹಿತ್ಯದ ಪ್ರಸ್ತುತತೆಯ ಕುರಿತು ಚರ್ಚೆ ನಡೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ವಿಚಾರ ಗೋಷ್ಠಿಯೂ ವಿದ್ಯಾರ್ಥಿಗಳಿಗೆ ಧಾರ್ಮಿಕ ಪ್ರಬುದ್ಧತೆಯ ಜೊತೆಗೆ ಸಾಮಾಜಿಕ , ಶೈಕ್ಷಣಿಕ ಮತ್ತು ಮಾನವೀಯ ಮೌಲ್ಯಗಳ ಅರಿವನ್ನು ಮೂಡಿಸಿತ್ತದೆ. ಈ ಮೂಲಕ ಸಾಹಿತ್ಯದ ಒಲವನ್ನು ಮತ್ತಷ್ಟು ಹೆಚ್ಚಿಸಲಿದೆ.’- ಡಾ. ಸುಭಾಷ್ ಜಿ. ರಾಣೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಚೆನೈ ರವರು ತಿಳಿಸಿದರು.
                         

LEAVE A REPLY

Please enter your comment!
Please enter your name here