ಹಿರಿಯ ಶಿಕ್ಷಣಾಧಿಕಾರಿಯಾಗಿದ್ದ ಹಿಲಿಯಾಣ ಬಾಲಕೃಷ್ಣ ಶೆಟ್ಟಿಯವರು ಕುಂದಾಪುರ ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ನೇಮಕ

0
84

ಕುಂದಾಪುರ : ತುಳುವರ ಪರಂಪರೆ, ಭಾಷೆ ಹಾಗೂ ಸಂಸ್ಕೃತಿಯ ಪೋಷಣೆಗೆ ಶತಮಾನದಿಂದ ಶ್ರಮಿಸುತ್ತಿರುವ ತುಳುವ ಮಹಾಸಭೆಯ ಕುಂದಾಪುರ ತಾಲೂಕು ಸಂಚಾಲಕರಾಗಿ ಹಿರಿಯ ಶಿಕ್ಷಣಾಧಿಕಾರಿ ಹಿಲಿಯಾಣ ಬಾಲಕೃಷ್ಣ ಶೆಟ್ಟಿಯವರನ್ನು ನೇಮಕ ಮಾಡಲಾಗಿದೆ.

1941ರ ಜೂನ್ 15ರಂದು ಕುಂದಾಪುರ ತಾಲ್ಲೂಕಿನ ಹಾರಾಡಿಯಲ್ಲಿ ಜನಿಸಿದ ಬಾಲಕೃಷ್ಣ ಶೆಟ್ಟಿಯವರು, ದಿವಂಗತ ಕುಚ್ಚೂರು ಮಹಾಬಲ ಶೆಟ್ಟಿ ಮತ್ತು ಹಿಲಿಯಾಣ ಕೃಷ್ಣಮ್ಮ ಶೆಡ್ತಿಯವರ ಪುತ್ರರಾಗಿದ್ದಾರೆ. ತಮ್ಮ ಶಿಕ್ಷಣವನ್ನು ಬ್ರಹ್ಮಾವರ, ಉಡುಪಿ, ಮಂಗಳೂರು ಹಾಗೂ ಧಾರವಾಡದಲ್ಲಿ ಪಡೆದು ಎಂ.ಎ., ಬಿ.ಎಡ್ ಪದವಿಗಳನ್ನು ಗಳಿಸಿದ್ದಾರೆ.

1960ರಲ್ಲಿ ಮುದೂರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಅವರು ನೂಜಿ, ಕೋಣಿ, ವಡೆರಹೋಬಳಿ ಸೇರಿದಂತೆ ಹಲವು ಶಾಲೆಗಳಲ್ಲಿ ಹಂತ ಹಂತವಾಗಿ ಪದೋನ್ನತಿ ಪಡೆದು, ಕೊನೆಗೆ ಕುಂದಾಪುರ ತಾಲೂಕು ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. 1986ರಲ್ಲಿ ಇತಿಹಾಸ ಉಪನ್ಯಾಸಕನಾಗಿ ವಂಡ್ಸೆ ಸರಕಾರಿ ಪಿ.ಯು. ಕಾಲೇಜಿನಲ್ಲಿ ಸೇವೆ ಆರಂಭಿಸಿ, ನಂತರ ಕುಂದಾಪುರ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 1999ರಲ್ಲಿ ನಿವೃತ್ತಿ ಹೊಂದಿದರು.

ನಿವೃತ್ತಿ ನಂತರವೂ ಅವರು ಶ್ರಮನಿಷ್ಠತೆಯಿಂದ ಸೇವಾ ಕಾರ್ಯಗಳಲ್ಲಿ ತೊಡಗಿದ್ದು, ಮಂಗಳೂರು ಸಿಟಿ ಹಾಸ್ಪಿಟಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ಕೆನರಾ ಕಾಲೇಜು, ಕುಂದಾಪುರದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಇಸಿಆರ್ ಟ್ರಸ್ಟ್ ನ ಟ್ರಸ್ಟಿ, ರೆಡ್ ಕ್ರಾಸ್ ಅಜೀವ ಸದಸ್ಯ, ಮಾನವ ಹಕ್ಕುಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಘಟನೆಯ ಕೋಶಧಿಕಾರಿ, ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಕಾರ್ಯದರ್ಶಿ ಮತ್ತು ಲಯನ್ಸ್ ಕ್ಲಬ್ – ಹಂಗಳೂರು 317-Cರ ಸಕ್ರೀಯ ಸದಸ್ಯರಾಗಿದ್ದಾರೆ.

ತುಳುವ ಮಹಾಸಭೆ 1928ರಲ್ಲಿ ಹಿರಿಯ ತಿಲಕವಾದಿ ಎಸ್. ಯು. ಪಣಿಯಾಡಿಯವರ ನೇತೃತ್ವದಲ್ಲಿ ಸ್ಥಾಪಿತವಾಗಿದ್ದು, ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಸಂರಕ್ಷಣೆಗೆ ಶ್ರಮಿಸುತ್ತಿದೆ. ಶತಮಾನೋತ್ಸವದತ್ತ ಪಯಣಿಸುತ್ತಿರುವ ಈ ಮಹಾಸಭೆ ಇದೀಗ ನೂತನ ಚೇತನದೊಂದಿಗೆ ಪುನಶ್ಚೇತನಗೊಳ್ಳುತ್ತಿದೆ.

ತುಳುನಾಡನ್ ಕಳರಿ ತರಬೇತಿ (ಸಮರ ಕಲೆ, ಮರ್ಮ ಚಿಕಿತ್ಸೆ), ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ನಿರ್ಮಾಣ, ಭಾಷಾ–ಜಾತಿ–ಮತ ಸೌಹಾರ್ದತೆ, ಪರಿಸರ ಸಂರಕ್ಷಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ಮಹಾಸಭೆ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದಿಂದ ದೇಶ ವಿದೇಶದ ಮಟ್ಟಕ್ಕೆ ವಿಸ್ತರಿಸುತ್ತಿದೆ.

ಶ್ರೀ. ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಕುಂದಾಪುರ ತಾಲೂಕಿನಲ್ಲಿ ತುಳು ಮತ್ತು ಕುಂದಗನ್ನಡದ ಭಾಷಾ ಬಾಂಧವ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹ ಹಾಗೂ ಸಮುದಾಯದ ಸಂಘಟಿತ ಬಲವರ್ಧನೆಗೆ ನಿರೀಕ್ಷಿತ ಬೆಳವಣಿಗೆಗಳು ಸಂಭವಿಸಲಿವೆ ಎಂಬ ವಿಶ್ವಾಸವನ್ನು ಮಹಾಸಭೆಯ ಕೇಂದ್ರ ಸಮಿತಿ ವ್ಯಕ್ತಪಡಿಸಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ತುಳುವ ಸಂಘಟನೆಗಳು ಅವರಿಗೆ ನೂತನ ಹೊಣೆಗಾರಿಕೆಗೆ ಅಭಿನಂದನೆ ಸಲ್ಲಿಸಿವೆ.

LEAVE A REPLY

Please enter your comment!
Please enter your name here