ಮೂಡುಬಿದಿರೆ: ತುಳು ಭಾಷೆ, ಸಾಹಿತ್ಯ, ಜಾನಪದ ಹಾಗೂ ನಾಟಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಶ್ರೀಮತಿ ಜಯಂತಿ ಎಸ್. ಬಂಗೇರ ಅವರನ್ನು ಮೂಡುಬಿದಿರೆ ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ಅಧಿಕೃತವಾಗಿ ನೇಮಕಗೊಳಿಸಲಾಗಿದೆ. ಈ ನೇಮಕಾತಿಯ ಮೂಲಕ ಅವರು ತಮ್ಮ ದೀರ್ಘಕಾಲದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಅನುಭವವನ್ನು ಸಂಘಟನೆ ಕ್ಷೇತ್ರದ ಶಕ್ತಿಯಾಗಿಸಿಕೊಳ್ಳಲಿದ್ದಾರೆ.
ಜಯಂತಿ ಎಸ್. ಬಂಗೇರ ಅವರು ಬಾಲ್ಯದಿಂದಲೇ ಸಾಹಿತ್ಯದತ್ತ ಆಸಕ್ತಿ ಹೊಂದಿದ್ದು, ತುಳು ಸಾಹಿತ್ಯದ ಮಿನುಗುತಾರೆಯಾಗಿ ಹೆಸರು ಪಡೆದಿದ್ದಾರೆ. ಅವರಿಂದ ರಚಿತವಾದ ಎನ್ನಂದಿ ಭಾಗ್ಯ, ಮನಸ್ಸ್ ಬದಲಾನಗ, ಸತ್ಯ ನೆಗಪುನಗ, ಮಾಯಿದ ಪುಣ್ಣಮೆ, ಸೊರಗೆದ ಪೂ ಮುಂತಾದ ನಾಟಕಗಳು ಹಾಗೂ ಕಥಾಸಂಕಲನಗಳು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿವೆ. ಅವರು ಬರಹಗಾರಿಕೆಯ ಹೊರತಾಗಿ, ‘ಉಡಲ್’ ಎಂಬ ತುಳು ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ 100ಕ್ಕೂ ಅಧಿಕ ಸಣ್ಣಕಥೆಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡಿದ್ದು, ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ, ಎಸ್. ಯು. ಪಣಿಯಾಡಿ ಪ್ರಶಸ್ತಿ, ವೀರರಾಣಿ ಅಬ್ಬಕ್ಕ ಪ್ರಶಸ್ತಿ, ತುಳು ಭಾಷೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಏಕೈಕ ಮಹಿಳಾ ಸಾಹಿತಿ, ವಿಶ್ವ ತುಳು ಸಮ್ಮೇಳನ – ದುಬೈನಲ್ಲಿ ಗೌರವ ಪ್ರಶಸ್ತಿಯನ್ನು ಪಡೆದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ, ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ, ತುಳುಕುಟ ಬೆದ್ರ ಇದರ ಸ್ಥಾಪಕ ಸದಸ್ಯೆಯಾಗಿ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಸಂಘಟನಾ ಸಾಮರ್ಥ್ಯವನ್ನು ಮೆರೆದಿದ್ದಾರೆ.
1928ರಲ್ಲಿ ಎಸ್. ಯು. ಪಣಿಯಾಡಿ ಅವರ ಚಾಲನೆಯಲ್ಲಿ ಸ್ಥಾಪಿತವಾದ ತುಳುವ ಮಹಾಸಭೆ ಶತಮಾನೋತ್ಸವದ ದಶಕದ ಹೆಜ್ಜೆಗಳನ್ನು ಇಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪುನಶ್ಚೇತನಗೊಳ್ಳುತ್ತಿದೆ.
ಅದರ ಅಂಗವಾಗಿ ತುಳುನಾಡಿನ ಸಮರಕಲೆಯಾದ ತುಳುನಾಡ ಕಳರಿ ಪುನರುಜ್ಜೀವನ, ಮರ್ಮ ಚಿಕಿತ್ಸೆ ತರಬೇತಿ, ದೈವಾರಾಧನೆ ಸಂರಕ್ಷಣೆ, ಬಸ್ರೂರು ತುಳುವೇಶ್ವರ ದೇವಾಲಯ ಪುನರ್ ಉದ್ಧಾರಣ, ಹಾಗೂ ಭಾಷಾ-ಸಾಂಸ್ಕೃತಿಕ ಏಕತೆ ಮೊದಲಾದ ಗುರಿಗಳನ್ನು ಸಾಧಿಸಲು, ಅಲ್ಲಲ್ಲಿ ತುಳುವ ಮಹಾಸಭೆ ಪ್ರಾದೇಶಿಕ ಸಮಿತಿಗಳನ್ನು ರೂಪಿಸಲಾಗುವುದು. ಈ ಉದ್ದೇಶದಿಂದ ತಾಲೂಕು ಮಟ್ಟದ ಚಟುವಟಿಕೆಗಳಿಗೆ ನೂತನ ನೇತೃತ್ವದ ಮೂಲಕ ಚಾಲನೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ಶ್ರೀಮತಿ ಜಯಂತಿ ಎಸ್. ಬಂಗೇರ ಅವರ ನೇತೃತ್ವದಲ್ಲಿ ತುಳುವ ಮಹಾಸಭೆಯ ಹೊಸ ಚಟುವಟಿಕೆಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ಅವರ ಅನುಭವ ಹಾಗೂ ವೈವಿಧ್ಯಮಯ ಪ್ರತಿಭೆಯಿಂದ ತಾಲೂಕು ಮಟ್ಟದಲ್ಲಿ ತುಳುನಾಡಿನ ಪರಂಪರೆ ಹಾಗೂ ಭಾಷಾ ಚಟುವಟಿಕೆಗಳು ಹೊಸ ತಾಣ ತಲುಪುವ ನಿರೀಕ್ಷೆಯಿದೆ.