ಭುವನೇಶ್ವರ : ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎಸಗಿದ ವಿದ್ಯಾರ್ಥಿನಿಯೊಬ್ಬಳು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಯುವತಿ ಬಾಲಸೋರ್ ಜಿಲ್ಲೆಯ ಫಕೀರ್ ಮೋಹನ್ ಕಾಲೇಜಿನಲ್ಲಿ 2ನೇ ವರ್ಷದ ಬಿ.ಇಡಿ. ಓದುತ್ತಿದ್ದರು. ಈ ವೇಳೆ ಸಹಾಯಕ ಪ್ರಾಧ್ಯಾಪಕ ಸಮೀರ ಕುಮಾರ್ ಸಾಹು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ, ಪ್ರಾಂಶುಪಾಲರಿಗೆ ದೂರಿದ್ದರು. ಜೂ.30ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ, ಇಲ್ಲದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆಗ ಸಾರಂಗಿಯವರು ಪ್ರಾಂಶುಪಾಲರಿಗೆ ಕರೆ ಮಾಡಿದಾಗ, ಆಂತರಿಕ ತನಿಖಾ ಸಮಿತಿಯನ್ನು ಸ್ಥಾಪಿಸಿದ್ದು, ಇನ್ನೈದು ದಿನಗಳಲ್ಲಿ ಅದು ವರದಿ ನೀಡಲಿದೆ ಎಂದು ಪ್ರಾಂಶುಪಾಲರು ಭರವಸೆ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೆ, ಶನಿವಾರ ಕಾಲೇಜಿನ ಕ್ಯಾಂಪಸ್‌ನಲ್ಲೇ ಯುವತಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ರಕ್ಷಿಸಲು ಹೋದ ಇನ್ನೊಬ್ಬ ವಿದ್ಯಾರ್ಥಿಗೂ ಗಂಭೀರ ಗಾಯಗಳಾಗಿವೆ.
ಶಿಕ್ಷಕನ ಬಂಧನ
ಆರೋಪಿ ಶಿಕ್ಷಕ ಸಮೀರ ಕುಮಾರ್ ಸಾಹುವನ್ನು ಬಂಧಿಸಲಾಗಿದೆ. ಕರ್ತವ್ಯಲೋಪದ ಹಿನ್ನೆಲೆ ಪ್ರಾಂಶುಪಾಲರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಂತ್ರಸ್ತೆ ದಾಖಲಾಗಿರುವ ಭುವನೇಶ್ವರದ ಎಐಐಎಂಎಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.