ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣದಲ್ಲಿ ಸೀನಿಯರ್ ಚೇಂಬರ್ ಶಂಕರನಾರಾಯಣ ಲೀಜನ್ “ಯೂತ್ ವಿಂಗ್ ಉದ್ಘಾಟನೆ ಮತ್ತು ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ” ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸೀನಿಯರ್ ಚೇಂಬರ್ ನ ತರಬೇತಿ ಮತ್ತು ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕ ಶ್ರೀ ಹುಸೇನ್ ಹೈಕಾಡಿ ಸೀನಿಯರ್ ಚೇಂಬರ್ ಯೂತ್ ವಿಂಗ್ ನ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ನಾಯಕರಾಗಿ ಬೆಳೆದು ಜೀವನದಲ್ಲಿ ಉನ್ನತ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದರು. ಸೀನಿಯರ್ ಚೇಂಬರ್ ಶಂಕರನಾರಾಯಣ ಲೀಜನ್ ನ ಅಧ್ಯಕ್ಷ ಶ್ರೀ ರಾಮಚಂದ್ರ ದೇವಾಡಿಗ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸೀನಿಯರ್ ಚೇಂಬರ್ ನ ಇತಿಹಾಸ ಮತ್ತು ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಕಾಲೇಜಿನ ಮತ್ತು ಸಮಾಜದ ಉನ್ನತಿಗಾಗಿ ಕೆಲಸಗಳನ್ನು ಮಾಡಬೇಕೆಂದು ಕರೆ ನೀಡಿದರು. ಯೂತ್ ವಿಂಗ್ ಅಧ್ಯಕ್ಷ ನಿಖಿತ್ ಕುಮಾರ್ ತಮಗೆ ದೊರೆತ ಈ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿದರು.
ಯೂತ್ ವಿಂಗ್ ಅಧ್ಯಕ್ಷ ನಿಖಿತ್ ಕುಮಾರ್, ಕಾರ್ಯದರ್ಶಿ ನಿಧಿ ಶೆಟ್ಟಿ, ಖಜಾಂಜಿ ಸಹನಾ ಹಾಗೂ ಪದಾಧಿಕಾರಿಗಳಿಗೆ ಶ್ರೀ ಹುಸೇನ್ ಹೈಕಾಡಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಯೂತ್ ವಿಂಗ್ ಸಂಚಾಲಕಿ ಕು.ಪ್ರಜ್ಞಾ ಸ್ವಾಗತಿಸಿ,ಎಂ.ಕಾಂ. ವಿದ್ಯಾರ್ಥಿನಿಯರಾದ ಕು. ಶ್ವೇತಾ ಮತ್ತು ಕು. ಪಲ್ಲವಿ ಅತಿಥಿ ಪರಿಚಯ ಮಾಡಿ, ಕು. ಸಹನಾ ನಿರೂಪಿಸಿ, ಕು. ಸುಷ್ಮಾ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಸೀನಿಯರ್ ಚೇಂಬರ್ ನ ವಲಯ 15ರ ತರಬೇತುದಾರ ಶ್ರೀ ಕೆಕೆ ಶಿವರಾಮ ಅವರು ನಾಯಕತ್ವ ಅಭಿವೃದ್ಧಿಯ ಕುರಿತು ತರಬೇತಿ ಕಾರ್ಯಗಾರ ನಡೆಸಿದರು.

