ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಜನ ವಿಕಾಸ ಸಮಿತಿ ಮೂಲ್ಕಿ ಇದರ ಸಹಕಾರದಲ್ಲಿ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ, ಅಂಚೆ ಜನ ಸಂಪರ್ಕ ಅಭಿಯಾನ ಹಾಗೂ ಉಚಿತ ಆಧಾರ್ ನೋಂದಣಿ ಮತ್ತು ಪರಿಷ್ಕರಣ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಆಧಾರ್ ನೋಂದಣಿ ಮತ್ತು ಪರಿಷ್ಕರಣ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಿರುವುದು ಬಹಳ ಸಂತೋಷದ ವಿಷಯ. ಇಂತಹ ಸೇವೆಗಳು ಜನರ ಬಾಗಿಲಿಗೆ ಬಂದು ತಲುಪುವುದು ಒಂದು ಮಹತ್ವದ ಹೆಜ್ಜೆ. ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬರಿಗೂ ಅಗತ್ಯ — ಬ್ಯಾಂಕ್ ವ್ಯವಹಾರ, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿವೇತನ, ಪಿಂಚಣಿ, ಎಲ್ಲ ಕಡೆ ಇದೊಂದು ಅವಶ್ಯ ದಾಖಲೆ ಎಂದು ಹಿರಿಯ ಅಂಚೆ ಅಧೀಕ್ಷಕ ಎಂ ಸುಧಾಕರ ಮಲ್ಯ ಶಿಬಿರಕ್ಕೆ ಚಾಲನೆ ನೀಡಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ನಮ್ಮ ಸಮಾಜದಲ್ಲಿ ಹಿರಿಯರು, ಮಹಿಳೆಯರು ಮತ್ತು ಮಕ್ಕಳಿಗೆ ಆಧಾರ್ ತಿದ್ದುಪಡಿ ಅಥವಾ ನೋಂದಣಿ ಕೇಂದ್ರಕ್ಕೆ ಹೋಗುವುದು ಕೆಲವೊಮ್ಮೆ ಕಷ್ಟಕರವಾಗುತ್ತದೆ. ಆದರೆ ಇಂತಹ ಶಿಬಿರಗಳು ಆ ತೊಂದರೆ ನಿವಾರಿಸುತ್ತವೆ ಎಂದು ಹೇಳಿದರು.
ಈ ಶಿಬಿರದಲ್ಲಿ ಹೊಸ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಮೊಬೈಲ್ ನಂಬರ್ ಹಾಗೂ ಇತರ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು. ಅಂಚೆ ಇಲಾಖೆಯ ವಿಮೆ ಸೇವೆ ಸ್ಥಳದಲ್ಲೇ ನೀಡಲಾಯಿತು. ಸ್ಥಳೀಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಟ್ಟು 115 ಕ್ಕೂ ಅಧಿಕ ಜನರು ಉಚಿತ ಶಿಬಿರದ ಮೂಲಕ ಸೇವೆಯನ್ನು ಪಡೆದು ಪ್ರಯೋಜನ ಹೊಂದಿದರು. ಶಿಬಿರವು ದಿನಾಂಕ 16 ಆಗಸ್ಟ್ 2025 ರಂದು ಕೂಡ ಮುಂದುವರೆಯಲಿ.
ಶಿಮಂತೂರಿನ ಶ್ರೀ ಶಾರದ ಸೊಸೈಟಿಯ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ನಿರ್ದೇಶಕ ಸುರೇಶ್ ರಾವ್ ನಿರಳಿಕೆ, ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮನಾ, ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಸದಸ್ಯರಾದ ಆನಂದ ಮೇಲಂಟ , ಶಶಿಕರ ಕೆರೆಕಾಡು, ದಾಮೋದರ ಶೆಟ್ಟಿ ಕೊಡೆತ್ತೂರು, ಶೋಭಾ ರಾವ್, ಗೀತಾ ಶೆಟ್ಟಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಜನ ವಿಕಾಸ ಸಮಿತಿ ಮೂಲ್ಕಿಯ ಸದಸ್ಯ ಪ್ರಾಣೇಶ್ ಭಟ್ ಡೆಂದಡ್ಕ ವಂದಿಸಿದರು, ಶಾಲಾ ಪ್ರಾಚಾರ್ಯ ಜಿತೇಂದ್ರ ವಿ ರಾವ್ ಕಾರ್ಯಕ್ರಮ ನಿರೂಪಿಸಿದರು.

