ಉಡುಪಿ : ಉಡುಪಿಯಲ್ಲಿ ಜನವರಿ 18ರಂದು ನಡೆಯಲಿರುವ ಶೀರೂರು ಮಠದ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಉಡುಪಿ ವಿಧಾನಸಭಾ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು ತುಂಬು ಹೃದಯದ ಧನ್ಯವಾದ ಸಲ್ಲಿಸಿದ್ದಾರೆ.
ಪರ್ಯಾಯ ಮಹೋತ್ಸವದ ಸಿದ್ಧತೆಗಳಿಗೆ ಸರ್ಕಾರದಿಂದ ದೊರೆತ ಈ ವಿಶೇಷ ಅನುದಾನದಿಂದ ರಸ್ತೆ ಸುಧಾರಣೆ, ಸಂಚಾರ ವ್ಯವಸ್ಥೆ, ಸ್ವಚ್ಛತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ವಿಶೇಷ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೂಡ ಪ್ರಸಾದ್ ರಾಜ್ ಕಾಂಚನ್ ಅವರು ಪ್ರೀತಿಪೂರ್ವಕ ಕೃತಜ್ಞತೆ ಸಲ್ಲಿಸಿದ್ದು, ಸರ್ಕಾರದ ಬೆಂಬಲದಿಂದ ಪರ್ಯಾಯ ಮಹೋತ್ಸವವನ್ನು ಅತ್ಯಂತ ಭಕ್ತಿಭಾವ ಮತ್ತು ಸುವ್ಯವಸ್ಥಿತವಾಗಿ ಆಚರಿಸಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರ್ಯಾಯ ಮಹೋತ್ಸವವು ಉಡುಪಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ದೇಶಾದ್ಯಂತ ಸಾರುವ ಪ್ರಮುಖ ಕಾರ್ಯಕ್ರಮವಾಗಿದ್ದು, ಸರ್ಕಾರದ ಸಹಕಾರದಿಂದ ಕಾರ್ಯಕ್ರಮ ಇನ್ನಷ್ಟು ಭವ್ಯವಾಗಿ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.
ವರದಿ: ವಿನೋದ್ ಶೆಟ್ಟಿ, ಉಡುಪಿ.

