ಉಡುಪಿ: ರಾಜ್ಯದಲ್ಲಿ ಮುಂದಿನ ಗ್ರಾಪಂ, ಜಿಪಂ, ತಾಪಂ, ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ (ಶಿಂಧೆ ಬಣ) ಸ್ಪರ್ಧಿಸಲಿದೆ ಎಂದು ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದು, ರಾಷ್ಟ್ರಾಧ್ಯಕ್ಷ ಏಕನಾಥ ಶಿಂಧೆಯವರು ಒಪ್ಪಿಗೆ ಸೂಚಿಸಿದರೆ ರಾಜ್ಯದಲ್ಲೂ ಮೈತ್ರಿ ಮುಂದುವರಿಸುವುದಾಗಿ ತಿಳಿಸಿದರು.
ರಾಜ್ಯದ ನೆಲ, ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೆಳಗಾವಿ ವಿವಾದ ಸುಪ್ರೀಂಕೋರ್ಟ್ನಲ್ಲಿದ್ದು, ನ್ಯಾಯಾಲಾಯದ ತೀರ್ಪಿಗೆ ನಾವು ಬದ್ಧ. ಕನ್ನಡಿಗರು ಮತ್ತು ಹಿಂದಿ ಭಾಷಿಕರ ಮೇಲೆ ದಾಳಿ ಮಾಡಿದ್ದು ಉದ್ಧವ ಠಾಕ್ರೆ ಶಿವಸೇನಾ ಬಣ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನಿಲುವು ತಳೆದಿದ್ದು, ಮುಸ್ಲಿಂ ತುಷ್ಟೀಕರಣದಿಂದ ಕಾನೂನು ಸುವ್ಯವಸ್ಥೆ ಹಳ್ಳಹಿಡಿದಿದೆ. ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲಿಸ್ತೇನ್ ಧ್ವಜ ಹಾರಾಟ, ಪಾಕಿಸ್ತಾನ್ ಪರ ಘೋಷಣೆ, ಗಣಪತಿ ಉತ್ಸವದ ಮೇಲೆ ಕಲ್ಲೂ ತೂರಾಟ ನಡೆಸಿದವರ ವಿರುದ್ಧ ಯುಎಪಿಎ ಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಆನಂದ ಅಡ್ಯಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಮುಖಂಡರಾದ ಮಹಾಲಿಂಗಣ್ಣ ಗುಂಜಗಾವಿ, ಅಮರ್ನಾಥ್, ಭಾಸ್ಕರ್, ಸುದರ್ಶನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

