ಉಡುಪಿ : ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಛತ್ರಪತಿ ಶಿವಾಜಿಯು ತನ್ನ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲ್ಯಗಳು ಅವರ ದೂರದೃಷ್ಟಿ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.
ಸರಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಮತ್ತು ಛತ್ರಪತಿ ಶಿವಾಜಿ ವಿವಿದ್ದೋದ್ದೇಶ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಚಿಕ್ಕ ವಯಸಿನಲ್ಲಿಯೇ ಆಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿಯು, ಆರಂಭಿಕ ವರ್ಷಗಳಲ್ಲಿ ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೊಡಿಸಿಕೊಂಡು ಸ್ತ್ರೀಯರ ಮೇಲೆ ಅಪಾರ ಗೌರವವನ್ನು ಹೊಂದಿದ್ದರು. ಮಹಿಳೆಯರಲ್ಲಿ ಸಮಾ ಸಮಾಜ ನಿರ್ಮಾಣ ಮಾಡಲು ಶಕ್ತಿ ತುಂಬಲು ಪ್ರಯತ್ನಿಸಿದ್ದರು ಎಂದರು.
ಛತ್ರಪತಿ ಶಿವಾಜಿಯ ಆಡಳಿತವು ಪ್ರಗತಿಪರ ನೀತಿ ಹಾಗೂ ದಕ್ಷ ಆಡಳಿತದಿಂದ ಗುರುತಿಸಲಟ್ಟಿದ್ದು, ಆಡಳಿತದ ಅವಧಿಯಲ್ಲಿ ಜನರ ಭಾವನೆಗಳನ್ನು ಅರ್ಥೈಸಿಕೊಂಡು ಅವರು, ಅಂದಿನ ದಿನಗಳಲ್ಲಿಯೇ ಸಂವಿಧಾನದ ಅಡಿಯಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಿದ್ದರು. ವೈರಿಗಳಿಂದ ಕರಾವಳಿಯನ್ನು ರಕ್ಷಿಸಲು ಸಮುದ್ರದಲ್ಲಿ ಬಲಿಷ್ಠ ನೌಕಾಪಡೆಯನ್ನು ಸನ್ನದ್ಧಗೊಳಿಸಿದ್ದರು. ಜಾತಿ, ಧರ್ಮ, ಭೇಧಗಳನ್ನು ಮೀರಿ ನೌಕಾ ಪಡೆಯಲ್ಲಿ ಅರ್ಹತೆಯ ಮೇಲೆ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸಮಗ್ರ ಆಡಳಿತಕ್ಕೆ ಉತ್ತೇಜನ ನೀಡಿದ್ದರು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಈ ಹಿಂದೆ ನಾಡು, ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಮುಂದೆಯೂ ಮರೆಯಬಾರದೆಂಬ ನೆಲೆಯಲ್ಲಿ ಹಾಗೂ ಅವರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರಕಾರದ ವತಿಯಿಂದ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಮಹನೀಯರುಗಳ ಆದರ್ಶಗಳು, ಜೀವನ ಚರಿತ್ರೆಗಳು ಯುವಪೀಳಿಗೆಗೆ ದಾರಿದೀಪವಾಗಲಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದಿ ಸತ್ರö್ಪಜೆಗಳಾಗಿ ಬಾಳುವುದರೊಂದಿಗೆ ಭವ್ಯ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕುವಂತಾಗಬೇಕು ಎಂದರು ಅವರು, ಶಿವಾಜಿ ಮಹಾರಾಜರಂತವರ ಆದರ್ಶಗಳು ಇಂದಿನ ಯುವಜನರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಎಂ.ಐ.ಟಿ ಮಣಿಪಾಲದ ನಿವೃತ್ತ ಪರೊಫೆಸರ್ ಡಾ. ನಾರಾಯಣ ಶೆಣೈ ಉಪನ್ಯಾಸ ನೀಡಿ ಮಾತನಾಡಿ, ಕ್ರಿ. ಶ. 1640 ರ ಫೆಬ್ರವರಿ 19 ಅಂದರೆ ಸುಮಾರು 396 ವರ್ಷಗಳ ಹಿಂದೆ ಜನಿಸಿದ ಶಿವಾಜಿಯು ಅಂದಿನ ಕಾಲಘಟ್ಟದಲ್ಲಿಯೇ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ್ದರು. ಜನ ಸಾಮಾನ್ಯರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಿಗೊಳಿಸಿದರೆ ಉತ್ತಮ ಸಮಾಜ ಕಟ್ಟಬಹುದಾಗಿದೆ ಎಂಬುದಕ್ಕೆ ಶ್ರೇಷ್ಠ ನಿದರ್ಶನ ಶಿವಾಜಿ ಅವರ ಆಡಳಿತ ವೈಖರಿ ಎಂದರು.
ಕೇವಲ 50 ವರ್ಷ ಜೀವಿಸಿದ ಇವರು, ಸಾಮಾಜಿಕ ಸುಧಾರಕರಾಗಿ ಸತಿ ಸಹಗಮನ ಪದ್ಧತಿ ನಿಷೇಧ, ಗೋ ಹತ್ಯೆ ಸೇರಿದಂತೆ ಮತ್ತಿತರ ಅನಿಷ್ಟ ಪದ್ಧತಿಗೆ ನಿಷೇಧ ಹೇರಿದ್ದರು. ತಮ್ಮ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಸಂಪನ್ಮೂಲವನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳುತ್ತಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾತನಾಡಿ, ಪ್ರಜೆಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಜನೋಪಯೋಗಿ ಯೋಜನೆಗಳನ್ನು ಆಡಳಿತದಲ್ಲಿ ಜಾರಿಗೆ ತಂದರು. ಶಿವಾಜಿ ಸೇರಿದಂತೆ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರುಗಳ ತತ್ವ ಸಿದ್ಧಾಂತಗಳನ್ನು ಅನುಸರಿಸಿದಾಗ ಮಾತ್ರ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಹೊಂದುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಮರಾಠ ಸಮುದಾಯದ ಪವರ್‌ಲಿಫ್ಟಿಂಗ್ ನಲ್ಲಿ ಸಾಧನೆಗೈದ ಪ್ರತಿಕ್ಷಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು (ರಿ) ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದ್ದೇಶ ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ನಾಯಕ್, ಸಮುದಾಯದ ಪದಾಧಿಕಾರಿಗಳು, ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಬಸ್ರೂರು ಶಾರದಾ ಕಾಲೇಜು ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ ವಂದಿಸಿದರು.

