ಉಡುಪಿ: ನಗರದಲ್ಲಿ 9 ರಿಂದ 10ಗಂಟೆ ಒಳಗೆ ಎಲ್ಲಾ ಅಂಗಡಿಮುಂಗಟ್ಟುಗಳು ಬಂದ್ ಆಗುತ್ತಿರುವುದರಿಂದ ಪ್ರವಾಸಿಗರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆವರೆಗೆ ಹೋಟೆಲ್, ಅಂಗಡಿಗಳಲ್ಲಿ ವ್ಯಾಪಾರ, ವಹಿವಾಟಿಗೆ ಅವಕಾಶ ಕಲ್ಪಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ರ್ನಿಣಯಕೈಗೊಳ್ಳಲಾಯಿತು.
ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಮಾನ್ಯ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿಷಯ ಪ್ರಸ್ತಾವಿಸಿದ ಶಾಸಕ ಯಶ್ಪಾಲ್ ಎ.ಸುವರ್ಣ, ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಆಗಮಿಸುವ ಪ್ರವಾಸಿಗರು ಉಡುಪಿಯಲ್ಲೇ ಉಳಿದುಕೊಳ್ಳುತ್ತಾರೆ. ಅವರು ಬರುವುದು ಸ್ವಲ್ಪ ತಡವಾದರೂ ಊಟಕ್ಕೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವ್ಯಾಪಾರ ಅವಧಿಯನ್ನು ವಿಸ್ತರಿಸುವುದು ಅಗತ್ಯ ಎಂದು ಹೇಳಿದರು. 9 ತಿಂಗಳಾದರೂ ನೋಂದಣಿ ಮಾಡಿಸಿಕೊಳ್ಳದಿರುವುದರಿಂದ ನಗರಸಭೆಗೆ ನಷ್ಟ ಉಂಟಾಗಿದೆ. ಇದನ್ನು ಯಾರು ಭರಿಸಬೇಕು ಎಂದು ಪ್ರಶ್ನಿಸಿದರು. ಮಣಿಪಾಲದ ವಾಣಿಜ್ಯ ಕಟ್ಟಡವನ್ನು ಯಾರಿಗೂ ಬಾಡಿಗೆ ನೀಡಿಲ್ಲ. ಇದರಿಂದ ಕೋಟ್ಯಂತರ ರೂ. ನಗರಸಭೆಗೆ ಹೊರೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವಾಗ ಪಿಪಿಪಿ ಮಾದರಿ ಅನುಸರಿಸುವಂತೆ ಶಾಸಕರು ಸೂಚಿಸಿದರು.
ಸೆ.1ರಿಂದ ಪ್ರತಿ ಸೋಮವಾರ ಅಥವಾ ಮಂಗಳವಾರ ಕಂದಾಯ ಇಲಾಖೆ ಸಂಬಂಧಿಸಿದ ಅರ್ಜಿ ವಿಲೇವಾರಿ ಮಾಡಬೇಕು. ಇದರಿಂದ ಜನರು ಕಚೇರಿಗೆ ಅಲೆದಾಡುವ ಸಮಸ್ಯೆ ತಪ್ಪಲಿದೆ ಎಂದು ತಿಳಿಸಿದರು. ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪ್ರಭಾರ ಪೌರಾಯುಕ್ತ ದುರ್ಗಾಪ್ರಸಾದ್, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಉಪಸ್ಥಿತರಿದ್ದರು.

