ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಕೊರತೆ: ಬಿಜೆಪಿ ಮಂಡಲದಿಂದ ಕಿನ್ನಿಗೋಳಿಯಲ್ಲಿ “ಜನಾಕ್ರೋಶ ಪ್ರತಿಭಟನೆ”

0
97

ಮೂಡುಬಿದಿರೆ: ಜಿಲ್ಲೆಯಲ್ಲಿ ತಲೆದೋರಿರುವ ಮರಳು-ಕೆಂಪು ಕಲ್ಲು ಕೊರತೆ, ನಿರ್ಮಾಣ ಕ್ಷೇತ್ರಕ್ಕೆ ಉಂಟಾಗಿರುವ ತೊಂದರೆ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರ ನೇತೃತ್ವದ ವಿಫಲ ಆಡಳಿತವನ್ನು ಖಂಡಿಸಿ “ಜನಾಕ್ರೋಶ ಪ್ರತಿಭಟನೆ” ಸೋಮವಾರ ಸಂಜೆ ಕಿನ್ನಿಗೋಳಿಯಲ್ಲಿ ನಡೆಯಿತು.

ಶಾಸಕ ಉಮಾನಾಥ ಎ. ಕೋಟ್ಯಾನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಮರಳು ಮತ್ತು ಕೆಂಪುಕಲ್ಲು ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿರುವುದರಿಂದ ಕಟ್ಟಡ ಹಾಗೂ ಕೆಂಪು ಕಲ್ಲಿನ ಕೋರೆಗಳಲ್ಲಿ ದುಡಿಯುವ ಸಾವಿರಾರು ಕೂಲಿ ಕಾರ್ಮಿಕರ ಬದುಕು ಹಾಗೂ ಲಕ್ಷಾಂತರ ಜನರ ಬಾಳಿಗೆ ತೊಂದರೆಯಾಗಿದೆ. ಈ ಪರಿಸ್ಥಿತಿ ಜನರ ಜೀವನಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ.

ಜಿಲ್ಲೆಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಮೀನುಗಾರಿಕೆ ಮತ್ತು ಕಟ್ಟಡ ನಿರ್ಮಾಣಗಳ ಕೆಲಸಗಳು ನಡೆಯುತ್ತಿರುವುದರಿಂದ ಬಡ ಕಾರ್ಮಿಕರು ಅದರಲ್ಲೇ ಜೀವನ ಸಾಗಿಸುವ ಅನಿವಾರ್ಯತೆಯಿರುವುದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹೌತ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು, ಜಿಲ್ಲೆಯ ಶಾಸಕರುಗಳನ್ನು, ಸ್ಪೀಕರ್ ನ್ನು ಒಳಗೊಂಡು ಸಭೆ ಕರೆಯಬೇಕು. ಅದರಲ್ಲಿ ಕರಾವಳಿ ಜಿಲ್ಲೆಗೆ ಹೊಯ್ದೆಯನ್ನು ಮೈನ್ಸ್ ನಿಂದ ತೆಗೆದು ಕೆಂಪುಕಲ್ಲಿನ ಕೋರೆಯಲ್ಲಿ ದುಡಿಯುವವರ ರಕ್ಷಣೆಗಾಗಿ ಮುಂದೆ ಬರಬೇಕು.

ಅಲ್ಲದೆ ಆದಷ್ಟು ಬೇಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೆಂಪು ಕಲ್ಲು ಮತ್ತು ಹೊಯ್ದೆಯನ್ನು ಬೇರ್ಪಡಿಸಿ ಸಾಮಾನ್ಯ ವಾದ ಕಾನೂನನ್ನು ತಂದು ಸಕ್ರಮಗೊಳಿಸಲು ಅನುಮತಿಕೊಡುವಂತಹ ಕೆಲಸಗಳನ್ನು ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸರಕಾರವನ್ನು ಒತ್ತಾಯಿಸಿದ ಅವರು ಸಮಸ್ಯೆಗೆ ಪರಿಹಾರ ಸಿಗದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಅವರು ಮಾತನಾಡಿ ಕಾಂಗ್ರೆಸ್ ಸರಕಾರ ಜನ ಸಾಮಾನ್ಯರ ಬಾಳಿನಲ್ಲಿ ಆಟವಾಡಬಾರದು. ಬಡವರ ಹಾಗೂ ನ್ಯಾಯದ ಪರವಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಸಮಾನತೆಯಿಂದ ನ್ಯಾಯ ನೀಡಿ. ಕಾಂಗ್ರೆಸ್ ಸರ್ಕಾರದ ದುರ್ಬಲ ನೀತಿ ಹಾಗೂ ಲಂಚದ ವ್ಯವಸ್ಥೆಯು ಹಲವುಸಮಸ್ಯೆಗೆ ಕಾರಣವಾಗಿದೆ ಎಂದ ಅವರು ವ್ಯವಸ್ಥೆಯನ್ನು ಸಕ್ರಮಗೊಳಿಸಿ ಇಲ್ಲದಿದ್ದರೆ ಇದೀಗ ಹಟ್ಟಿಯಿಂದ ಅಕ್ರಮವಾಗಿ ದನಗಳನ್ನು ಕದ್ದುಕೊಂಡು ಹೋದಂತೆ ಮುಂದೊಂದು ದಿನ ಕೆಂಪು ಕಲ್ಲಿನಲ್ಲಿ ನಿರ್ಮಿಸಿರುವ ಕಂಪೌಂಡ್ ಗಳನ್ನು ಕೆಡವಿ ಕಲ್ಲುಗಳನ್ನು ಕದ್ದುಕೊಂಡು ಹೋಗಬಹುದು ಎಂದು ಎಚ್ಚರಿಸಿದ ಅವರು ಸರಕಾರ ಜನರ ಅಗತ್ಯವಾದ ವಸ್ತುಗಳನ್ನು ಒದಗಿಸುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರು ಸುನಿಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು ರಂಜಿತ್ ಪೂಜಾರಿ ತೋಡಾರ್ ಮತ್ತು ಹರಿಪ್ರಸಾದ್ ಶೆಟ್ಟಿ, ಶೆಟ್ಟಿ, ಪಕ್ಷದ ಪ್ರಮುಖರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಕಸ್ತೂರಿ ಪಂಜ, ಬಜಪೆ ವಲಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಪೂಜಾರಿ, ಮಂಡಲ ಪದಾಧಿಕಾರಿಗಳು, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗು ಸದಸ್ಯರು, ಕಟ್ಟಡ ಕಾರ್ಮಿಕರು ಮಹಾಶಕ್ತಿಕೇಂದ್ರಗಳ ಅಧ್ಯಕ್ಷ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಪ್ರಮುಖರು, ವಿವಿಧ ಮೋರ್ಚಾ ಪ್ರಕೋಷ್ಠಗಳ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಭಿಲಾಶ್ ಶೆಟ್ಟಿ ಸ್ವಾಗತಿಸಿ, ಸೋಮನಾಥ ಕೋಟ್ಯಾನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here