ಅಸಂಟಿತ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಶ್ರಮಯೋಗಿ ಮಾನ್​ಧನ್​ ಪ್ರಯೋಜನ

0
20

ಉಡುಪಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್​ ಧನ್​ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್​ ಧನ್​ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಸಂಘಟಿತ ಕಾರ್ಮಿಕರಿಗೆ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಹೀಗಾಗಿ ವಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಾರ್ಮಿಕರನ್ನು ಯೋಜನೆಯಡಿ ನೋಂದಾಯಿಸಲು ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾರ್ಚ್​ 15 ರ ವರೆಗೆ ನಡೆಯಲಿದೆ.

18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್​ ಕಾರ್ಡ್​, ಆಧಾರ್​ಗೆ ಲಿಂಕ್​ ಆಗಿರುವ ಮೊಬೈಲ್​ ಸಂಖ್ಯೆ, ಬ್ಯಾಂಕ್​ ಪಾಸ್​ ಪುಸ್ತಕ ಪ್ರತಿ ಹಾಗೂ ಮೊದಲನೇ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆದಾಯ ತೆರಿಗೆ ಪಾವತಿದಾರರು, ಸಂಘಟಿತ ವಲಯದ ಕಾರ್ಮಿಕರು, ಇ.ಎಸ್​.ಐ, ಪಿ.ಎಫ್​ ಯೋಜನೆಗೆ ಒಳಪಟ್ಟವರು ಈ ಯೋಜನೆಗೆ ಅರ್ಹರಿರುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್​ ಧನ್​ ಯೋಜನೆಯ ವಿಶೇಷ ನೋಂದಣಿ ಅಭಿಯಾನದಡಿ ಜಿಲ್ಲೆಗೆ 7275 ಕಾರ್ಮಿಕರನ್ನು ನೋಂದಾಯಿಸಲು ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 7225 ಜನ ಕಾರ್ಮಿಕರು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಮನೆಗೆಲಸ ನಿರ್ವಹಿಸುವ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ನೋಂದಾಯಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಜಿಲ್ಲಾ ಕಾರ್ಮಿಕ ಅಧಿಕಾರಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್​ ಷಾ ಅಲ್ತಾಫ್​ ಅಹಮದ್​, ಪೌರಾಯುಕ್ತ ಮಹಾಂತೇಶ್​ ಹಂಗರಗಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here