ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ದಿನಕ್ಕೊಂದು ಹೇಳಿಕೆಗಳು ಹೊರಬೀಳುತ್ತಿವೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಮೈಸೂರು ದಸರಾದಲ್ಲಿ ಈ ಬಾರಿ ಏರ್ ಶೋ ಆಯೋಜನೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಇದಲ್ಲದೇ ರಾಜ್ಯದ ಎತ್ತಿನಹೊಳೆ, ಕೃಷ್ಣ, ಮಹದಾಯಿ ಕಳಸ ಬಂಡೂರಿ, ಅಪ್ಪರ್ ಭದ್ರ, ಮೇಕೆದಾಟು ಯೋಜನೆಗಳ ತೊಡಕು ನಿವಾರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ತಣ್ಣಗಾಗದ ಅಧಿಕಾರ ಹಂಚಿಕೆ ಕದನ
ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಮುನ್ನವೇ, ಡಿಸಿಎಂ ಡಿಕೆಶಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೂ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಇಂದು ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲರನ್ನು ಸಿಎಂ ಮತ್ತು ಡಿಸಿಎಂ ಇಬ್ಬರೂ ಭೇಟಿ ಮಾಡಲಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಸಂಜೆ 6 ಗಂಟೆಗೆ ಹೈಕಮಾಂಡ್ ಭೇಟಿಗೆ ಸಮಯ ನಿಗದಿ
ರಣದೀಪ್ ಸಿಂಗ್ ಸುರ್ಜೇವಾಲರ ಜೊತೆ ಇಂದು ಸಂಜೆ 6 ಗಂಟೆಗೆ ಸಿಎಂ, ಡಿಸಿಎಂ ಚರ್ಚೆ ನಡೆಸಲಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಭೇಟಿಗೆ ಸಿಎಂ ಮತ್ತು ಡಿಸಿಎಂ ಮುಂದಾಗಿರುವುದು ಕುತೂಹಲ ಮೂಡಿಸಿದೆ. ಆದರೆ, ಸಿದ್ದರಾಮಯ್ಯ ಮಾತ್ರ, ರಾಹುಲ್ ಗಾಂಧಿ ಭೇಟಿಗೆ ಇನ್ನೂ ಅವಕಾಶ ದೊರೆತಿಲ್ಲ ಎಂದಿದ್ದರೆ, ಸತೀಶ್ ಜಾರಕಿಹೊಳಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆಯಾಗಬಹುದು ಎಂದಿದ್ದಾರೆ.