ಉಡುಪಿ: ಕ್ಷಣಿಕ ಸಂತೋಷಕ್ಕೆ ಹಂಬಲಿಸಿ, ಸಹವಾಸ ದೋಷದಿಂದ ಮಾದಕ ವ್ಯಸನಕ್ಕೆ ಬಲಿ ಬಿದ್ದು ಬಂಗಾರದಂತಹ ಕಾಲೇಜು ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಉಡುಪಿ ಜಿಲ್ಲಾ ಟೌನ್ ಪೊಲೀಸ್ ಸ್ಟೇಷನ್ ನ ಎಸ್.ಐ ಭರತೇಶ್ ಹೇಳಿದರು.
ಅವರು ‘ನಶೆಯಿಂದ ಉಷೆಯೆಡೆಗೆ ‘ ‘ನಶಾ ಮುಕ್ತ ಭಾರತದತ್ತ ನಮ್ಮ ಚಿತ್ತ ‘ ಎನ್ನುವ ಘೋಷ ವಾಕ್ಯದಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಸ್ಟೇಷನ್ ವತಿಯಿಂದ ಸೈಲಸ್ ಪದವಿ ಪೂರ್ವ ಕಾಲೇಜಿನ ಮಾದಕ ವ್ಯಸನ ವಿರೋಧಿ ಘಟಕದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಾದಕ ವ್ಯಸನ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಶೆ ಮುಕ್ತ ಭಾರತಕ್ಕಾಗಿ ಇದು ಮೊದಲ ಹೆಜ್ಜೆಯಾಗಿದ್ದು, ಉಡುಪಿಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹೆಚ್ಚು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸುತ್ತಣ ಸಮಾಜಕ್ಕೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸುವಂತೆ ಕರೆ ನೀಡಿದರು. ಮುಂದುವರಿದು ಭಾರತದಲ್ಲಿ 7.5 ಕೋಟಿ ಮಾದಕ ವ್ಯಸನಿಗಳಿದ್ದು ದಿನವೊಂದಕ್ಕೆ ಹತ್ತರಂತೆ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದರು. ಬಳಿಕ ನಶಾ ಮುಕ್ತ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ಸ್ವೀಕಾರ ನಡೆಯಿತು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು. ಮಾದಕ ವ್ಯಸನ ವಿರೋಧಿ ಘಟಕದ ಸಂಯೋಜಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.