ಉಡುಪಿ: ಯುವವಾಹಿನಿ ಉಡುಪಿ ಘಟಕದ ರಜತ ಮಹೋತ್ಸವದ ಸಮಾರೋಪ ಸಮಾರಂಭ ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 28 ರಂದು ಸಾಯಂಕಾಲ 4 ಗಂಟೆಗೆ ಉಡುಪಿ ಜಿಲ್ಲೆಯ ವಿವಿಧ ಬಿಲ್ಲವ ಸಂಘಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ‘ಯುವ ಸಂಗಮ’ ನಡೆಯಲಿದ್ದು, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉದ್ಘಾಟಿಸಲಿದ್ದಾರೆ ಎಂದರು.
ಮಾರ್ಚ್ 1 ರಂದು ಬೆಳಿಗ್ಗೆ 9:30ಕ್ಕೆ ನಡೆಯಲಿರುವ ‘ಯುವ ಸದ್ಭಾವನಾ’ ಯುವ ಬಿಲ್ಲವ ಸಮಾವೇಶವನ್ನು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಚ್. ಕೆ. ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಶಶಿಧರ ಅಮೀನ್, ಮಹೇಶ್ ಅಂಜನ್, ಉದ್ಯಮಿ ಅಶೋಕ್ ಎನ್. ಪೂಜಾರಿ ಮತ್ತು ಜ್ಯೋತಿ ಅಮೀನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಈ ಸಂದರ್ಭದಲ್ಲಿ ಸಾಧಕರಾದ ರಾಮಚಂದ್ರ ಮಾಬಿಯಾನ್, ಪ್ರಕಾಶ್ ಕರ್ಕೇರ, ಪ್ರಭಾಕರ ಪೂಜಾರಿ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕಿ ಡಾ. ಸುನೀತಾ ಎ. ಅವರಿಗೆ ‘ರಜತ ರತ್ನ’ ಗೌರವ ನೀಡಲಾಗುವುದು ಎಂದರು. ಮಧ್ಯಾಹ್ನ 2:30ಕ್ಕೆ ನಡೆಯುವ ‘ಯುವ ಸಿರಿ’ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಇರುವೈಲು ತಾರಾನಾಥ ಪೂಜಾರಿ ವಿಶೇಷ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.
ಉದ್ಯಮಿ ಸೂರ್ಯಪ್ರಕಾಶ್ ಕಪ್ಪೆಟ್ಟು ಅವರು ‘ರಜತಸ್ಮೃತಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಸಾಯಂಕಾಲ 5 ಗಂಟೆಗೆ ರಾಕೇಶ್ ಕಟಪಾಡಿ ನಿರ್ದೇಶನದಲ್ಲಿ ಯುವವಾಹಿನಿ ಸದಸ್ಯರಿಂದ ‘ಮಣ್ಣೆದಸಿರಿ’ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರವಿ ಕುಮಾರ್ ಕರ್ಕೇರ ನಿರ್ದೇಶನದಲ್ಲಿ ತುಳು ನಾಟಕ ‘ಸತ್ಯೋದ ಬೊಳ್ಳಿಲು’ ಪ್ರದರ್ಶನಗೊಳ್ಳಲಿದೆ ಎಂದರು. ರಜತ ಮಹೋತ್ಸವ ಸಮಿತಿ ಸಂಚಾಲಕ ರಘುನಾಥ ಮಾಬಿಯನ್, ಘಟಕದ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ನಾರಾಯಣ ಬಿ ಎಸ್, ಪ್ರವೀಣ್ ಕುಮಾರ್ ಉಪಸಿತರಿದ್ದರು.
