ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ  ಸಿಂಹ

0
126

ಬೆಂಗಳೂರು: ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್‌  ಬಗ್ಗೆ ವಿರೋಧ ಕೇಳಿಬಂದಿದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇತ್ತೀಚೆಗೆ ಹಾಸನದ ಅಮೀರ್ ಮೊಹಲ್ಲಾದಲ್ಲಿನ ಅವರ ನಿವಾಸಕ್ಕೆ ತೆರಳಿ, ಸರ್ಕಾರದ ಪರ ಜಿಲ್ಲಾಡಳಿತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿತ್ತು. ಸದ್ಯ ಈ ವಿಚಾರವಾಗಿ ಮಾಜಿ ಸಂಸದ ಪ್ರತಾಪ್​ ಸಿಂಹ  ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ದು, ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ‘ಬಾನು ಮುಷ್ತಾಕ್ ಹಿಂದೂ ವಿರೋಧಿ,‌ ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ’. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಅವರನ್ನು ಆಯ್ಕೆ ಮಾಡಿದೆ ಎಂದಿದ್ದಾರೆ.

ಇನ್ನು ಹಿಂದೂ ಜಾಗರಣಾ ಸಮಿತಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ವಿವಿಧೆಡೆಗಳಲ್ಲಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಹಿಂದೂಪರ ಸಂಘಟನೆಗಳು ಕೂಡ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಪ್ರತಿಭಟನೆ ಮಾಡಿದ್ದವು. ಇತ್ತೀಚೆಗೆ ರಾಷ್ಟ್ರ ರಕ್ಷಣಾ ಸೇನೆ ಕಾರ್ಯಕರ್ತರು ಬಾನು ಮುಷ್ತಾಕ್​​ರನ್ನ ಭೇಟಿಯಾಗಿ, ದಸರಾ ಉದ್ಘಾಟನೆ ಮಾಡಬೇಡಿ, ಆಹ್ವಾನವನ್ನ ತಿರಸ್ಕರಿಸಿ ಎಂದು ಮನವಿ ಮಾಡಿದ್ದರು. ಅಧಿಕೃತ ಆಹ್ವಾನ ಬಳಿಕ ಪ್ರತಿಕ್ರಿಯಿಸಿದ್ದ ಬಾನು ಮುಷ್ತಾಕ್, ಆಹ್ವಾನ ಕೊಟ್ಟಿರೋದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದರು. ಇನ್ನು ದಸರಾ ಹಬ್ಬದ ಕುರಿತು ಮಾತನಾಡುತ್ತಾ ದಸರಾ ನಮ್ಮ ಎಲ್ಲರ ಮನೆಯ ಹಬ್ಬ ಎಂದು ಕೊಂಡಾಡಿದ್ದರು.

LEAVE A REPLY

Please enter your comment!
Please enter your name here