ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆಯ ತ್ರೈಮಾಸಿಕ ಸಭೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಇದರ ಪ್ರಥಮ ತ್ರೈಮಾಸಿಕ ಸಭೆಯು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ-ಅಂಬಲಪಾಡಿಯ ಪ್ರಗತಿ ಸೌಧ ಸಭಾಂಗಣದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ, ಡಾ! ಡಿ.ವಿರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಮಾತನಾಡಿ ಜನ ಜಾಗೃತಿ ಕಾರ್ಯ ಚಟುವಟಿಕೆಗಳ ಬಗ್ಗೆ ಸಲಹೆ ಸೂಚನೆಗಳನ್ನಿತ್ತರು.
ಜಿಲ್ಲಾ ಜನ ಜಾಗೃತಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಆಯ್ಕೆ:
ಜನ ಜಾಗೃತಿ ವೇದಿಕೆಯ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನೀರೆ ಕೃಷ್ಣ ಶೆಟ್ಟಿ ಅವರನ್ನು ಮುಂದಿನ 2 ವರ್ಷಗಳ ಅವಧಿಗೆ ನೂತನ ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಸಮಿತಿಗೆ ನೂತನ ಸದಸ್ಯರನ್ನಾಗಿ ಸುಜಾತ ಸುವರ್ಣ, ಸತ್ಯೇಂದ್ರ ಪೈ, ಸುಧಾಕರ ಕರ್ಕೇರ ಹಾಗೂ ವೃಷಭರಾಜ್ ಜಯಂತ್ ಅವರನ್ನು ಸೇರ್ಪಡೆಗೊಳಿಸಲಾಯಿತು.
ವೇದಿಕೆಯ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಗತ ಸಭೆಯ ವರದಿ ವಾಚಿಸಿದರು. ಉಡುಪಿ ಜಿಲ್ಲಾ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳು ತಮ್ಮ ತಾಲೂಕಿನ ಜನ ಜಾಗೃತಿ ಸಾಧನಾ ವರದಿಯನ್ನು ಮಂಡಿಸಿದರು.
ಪ್ರಾದೇಶಿಕ ವಿಭಾಗದ ಜನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ 2025-26ನೇ ಸಾಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ವಿಶ್ವ ತಂಬಾಕು ವಿರೋಧಿ ದಿನಾಚರಣೆ, ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಅನುಷ್ಠಾನ, ಮದ್ಯ ವರ್ಜನ ಶಿಬಿರ, ಗಾಂಧಿ ಜಯಂತಿ ಕಾರ್ಯಕ್ರಮ, ನವ ಜೀವನ ಪೋಷಕರ ತರಬೇತಿ, ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಸಹಿತ ಇನ್ನಿತರ ವಿಷಯಗಳನ್ನು 2025-26ನೇ ಸಾಲಿನ ಕ್ರಿಯಾ ಯೋಜನೆಯಂತೆ ಚರ್ಚಿಸಲಾಯಿತು
ಏಳು ತಾಲೂಕು ವೇದಿಕೆಗಳನ್ನು ಒಳಗೊಂಡಿರುವ ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆಯ ನಿಯೋಜತ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೆಬ್ರಿ, ಉದಯ ಕುಮಾರ್ ಹೆಗ್ಡೆ ಕಾರ್ಕಳ, ಪ್ರಕಾಶ್ ಶೆಟ್ಟಿ ಬ್ರಹ್ಮಾವರ, ಸತ್ಯಾನಂದ ನಾಯಕ್ ಉಡುಪಿ, ದಯಾನಂದ ಹೆಜಮಾಡಿ ಕಾಪು, ಉಮೇಶ್ ಶೆಟ್ಟಿ ಶ್ಯಾನ್ ಕಟ್ ಕುಂದಾಪುರ, ಸುಧಾಕರ ಆಚಾರ್ಯ ಬೈಂದೂರು ಹಾಗೂ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ! ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತೀವ್ರವಾಗಿ ಖಂಡಿಸಿ, ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆ ಹಾಗೂ 7 ತಾಲೂಕು ವೇದಿಕೆಗಳ ಪದಾಧಿಕಾರಿಗಳು, ಎಮ್ಐಎಸ್ ಯೋಜನಾಧಿಕಾರಿ ಸ್ವಪ್ನಾ, ಮೇಲ್ವಿಚಾರಕರ ಕೃಷ್ಣಪ್ಪ, ನಿತೇಶ್ ಕೆ. ಮುಂತಾದವರು ಉಪಸ್ಥಿತರಿದ್ದರು.
ಜನ ಜಾಗೃತಿ ಉಡುಪಿ ತಾಲೂಕು ಕಾರ್ಯದರ್ಶಿ ಸುರೇಂದ್ರ ನಾಯ್ಕ್ ಸ್ವಾಗತಿಸಿ, ಹೆಬ್ರಿ ತಾಲೂಕು ಕಾರ್ಯದರ್ಶಿ ಲೀಲಾವತಿ ವಂದಿಸಿದರು.