ವರದಿ:- ಮಂದಾರ ರಾಜೇಶ್ ಭಟ್
ತುಳುನಾಡು ವಾರ್ತೆ
ಕಾರ್ಕಳ:ತುಳುನಾಡಿನ ಭಾಷಾ–ಸಾಂಸ್ಕೃತಿಕ ಚಳುವಳಿಯ ಪ್ರಮುಖ ವೇದಿಕೆಯಾದ ತುಳುವ ಮಹಾಸಭೆ ಕಾರ್ಕಳ ಘಟಕದ ಸಂಚಾಲಕರನ್ನಾಗಿ ನಿವೃತ್ತ ಮೆಸ್ಕಾಂ ಇಂಜಿನಿಯರ್ ಕೆ.ವಿ. ಶ್ರೀಕಾಂತ ರಾವ್ ಅವರನ್ನು ನೇಮಿಸಲಾಗಿದೆ.
ಶ್ರೀಕಾಂತ ರಾವ್ ಅವರು ಮೆಸ್ಕಾಂನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಗೌರವಾನ್ವಿತವಾಗಿ ನಿವೃತ್ತಿ ಹೊಂದಿದ್ದಾರೆ. ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು, ಕರ್ಹಾಡ ಬ್ರಾಹ್ಮಣ ಸುಧಾರಕ ಸಂಘ, (ರಿ )ಗುಂಡ್ಯಡ್ಕ ಮೂಡಬಿದ್ರೆ ಇದರ ಮಾಜಿ ಅಧ್ಯಕ್ಷರಾಗಿ ಸಂಘದ ಏಳಿಗೆಗೆ ಶ್ರಮಿಸಿದ್ದಾರೆ. ತಾಲೂಕು ಗಮಕ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಅದೇ ರೀತಿ ವಿದ್ಯಾಸರಸ್ವತಿ ಭಜನಾ ಮಂದಿರ, ಇದರ ಗೌರವ ಸಲಹೆಗಾರರಾಗಿ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ತೇಜನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಅವರು ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಮುದಾಯದ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದಾರೆ.
1928ರಲ್ಲಿ ಪಣಿಯಾಡಿ ಎಸ್.ಯು. ಅವರ ನೇತೃತ್ವದಲ್ಲಿ ಸ್ಥಾಪಿತವಾದ ತುಳುವ ಮಹಾಸಭೆ, ಶತಮಾನೋತ್ಸವ ಹೆಜ್ಜೆಗಳಲ್ಲಿ ಪುನರ್ ಚೇತನಗೊಳ್ಳುತ್ತಿದ್ದು, ತುಳು ಸಂಸ್ಕೃತಿ ಮತ್ತು ಬೋಧನೆ, ತುಳುನಾಡನ್ ಕಲರಿ ತರಬೇತಿ, ನಶಿಸಿರುವ ದೈವಾರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಪರಿಸರ ಸಂರಕ್ಷಣೆ, ಸಮಾಜಸೌಹಾರ್ದತೆ ಮೊದಲಾದ ವಿವಿಧ ಕಾರ್ಯಕ್ರಮಗಳನ್ನು ಪ್ರಾದೇಶಿಕ ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದೆ.
ಕಾರ್ಕಳ ಘಟಕದ ಸಂಚಾಲಕರಾಗಿ ಶ್ರೀಕಾಂತ ರಾವ್ ನೇಮಕಗೊಂಡ ಹಿನ್ನೆಲೆಯಲ್ಲಿ, ಸ್ಥಳೀಯ ಮಟ್ಟದಲ್ಲಿ ತುಳು ಭಾಷಾ ಸಂರಕ್ಷಣೆ, ಸಂಸ್ಕೃತಿ ಬೆಳವಣಿಗೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೆಚ್ಚಿನ ಬಲ ದೊರೆಯಲಿದೆ ಎಂದು ಮಹಾಸಭೆಯ ಕೇಂದ್ರ ಸಮಿತಿ ಅಭಿಪ್ರಾಯಪಟ್ಟಿದೆ.
ತುಳುವ ಮಹಾಸಭೆ ಕಾರ್ಯಾಧ್ಯಕ್ಷ ರಾಜೇಶ ಆಳ್ವ ಮತ್ತು ಮುಖ್ಯ ಸಂಚಾಲಕ ಪ್ರಮೋದ್ ಸಪ್ರೆ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ