ಹೈಎಲ್‌ಡಿಎಲ್ ಕೊಲೆಸ್ಟ್ರಾಲ್‌ ಕುರಿತು ನೀವು ತಿಳಿಯಲೇಬೇಕಾದ ಕೆಲವು ಸಂಗತಿಗಳು

0
5

ಅವರ ಹೆಸರು ರಾಜೀವ್ ಮೆಹ್ತಾ. ವಯಸ್ಸು 38 ವರ್ಷ. ಒಂದು ದಿನ ಅವರು ತಮ್ಮ ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿ ಬಂದರು. ಆದರೆ ಅವರಿಗೆ ಅವತ್ತು ದೊರೆಯುವ ಫಲಿತಾಂಶ ಅವರ ಬದುಕನ್ನೇ ಬದಲಿಸುತ್ತದೆ ಎಂಬ ಅರಿವಿರಲಿಲ್ಲ. ಯಾಕೆಂದರೆ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಕಾಯಿಲೆ ಇರಲಿಲ್ಲ. ಯಾವುದೇ ತೊಂದರೆಯ ಲಕ್ಷಣಗಳೂ ಇರಲಿಲ್ಲ. ಆದರೆ ಅವರ ವರದಿಯಲ್ಲಿ ಅವರಿಗೆ ಹೈ ಎಲ್‌ಡಿಎಲ್ ಕೊಲೆಸ್ಟ್ರಾಲ್ ಇದೆ ಎಂದು ಬಂದಾಗ ಮಾತ್ರ ಅವರಿಗೆ ಆಶ್ಚರ್ಯವಾಯಿತು.

ಇದು ಅವರೊಬ್ಬರ ಕತೆ ಮಾತ್ರ ಅಲ್ಲ. ಈಗ ಬಹಳಷ್ಟು ಮಂದಿಯಲ್ಲಿ ಇದು ಸಾಮಾನ್ಯವಾಗಿದೆ. ಹಿಂದೆ ಕೊಲೆಸ್ಟ್ರಾಲ್ ಸಮಸ್ಯೆ ಇರುವುದು ವಯಸ್ಸಾದವರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಇತ್ತು. ಅಲ್ಲದೇ ಇದು ಜೀವನಶೈಲಿಗೆ ಸಂಬಂಧಿಸಿದ್ದು ಎಂಬ ತಪ್ಪು ಅಭಿಪ್ರಾಯವೂ ಇತ್ತು. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಶೇಕಡ 31ರಷ್ಟು ಜನರು ಹೈ ಕೊಲೆಸ್ಟ್ರಾಲ್‌ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಈ ಕುರಿತು ಎಲ್ಲೆಡೆ ಜಾಗೃತಿ ಮೂಡಿಸುವುದು ಬಹಳ ಅಗತ್ಯವಾಗಿದೆ.

ಹೈ ಎಲ್‌ಡಿಎಲ್ ಕೊಲೆಸ್ಟ್ರಾಲ್ ಇರುವಾಗ ಅದು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಇದು ಒಳಗೆ ರಕ್ತನಾಳಗಳಲ್ಲಿ ಸಂಗ್ರಹವಾಗಿ, ಅಡಚಣೆ ಉಂಟುಮಾಡುತ್ತದೆ. ಇದರಿಂದ ಗಂಭೀರ ಹೃದಯ ಸಮಸ್ಯೆ ಉಂಟಾಗಬಹುದಾಗಿದೆ. ಹಾಗಾಗಿ ಚಿಕಿತ್ಸೆ ನೀಡುವುದಕ್ಕೆ ಕೆಲವು ತಿಂಗಳುಗಳು ವಿಳಂಬವಾದರೂ ಆಮೇಲೆ ತೀವ್ರ ಚಿಕಿತ್ಸೆ ನೀಡಿದರೂ ಸಂಪೂರ್ಣವಾಗಿ ಗುಣಪಡಿಸಲಾಗದ ಅಪಾಯ ಉಂಟಾಗಬಹುದು. ವಿಶೇಷವಾಗಿ ಮಧುಮೇಹ, ರಕ್ತದೊತ್ತಡ ಅಥವಾ ಧೂಮಪಾನದ ಇತಿಹಾಸ ಹೊಂದಿರುವ ವ್ಯಕ್ತಿಗಳಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಾದರೆ ಪ್ಲೇಕ್ ಫಾರ್ಮೇಷನ್ ಹೆಚ್ಚು ಉಂಟಾಗಬಹುದು. ಅಂದರೆ ಅಪಧಮನಿಯ ಗೋಡೆಗಳಲ್ಲಿ ಕೊಬ್ಬಿನ ಪದಾರ್ಥಗಳ ಶೇಖರಣೆ ಆಗಬಹುದು.

ಈ ಕುರಿತು ಮಾತನಾಡುವ ರಾಜೀವ್ ಅವರು, “ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾದ ವಿಷಯ ಎಂದರೆ ನನಗೆ ಅನಾರೋಗ್ಯ ಅಂತ ಅನ್ನಿಸುತ್ತಲೇ ಇರಲಿಲ್ಲ. ಕೊಲೆಸ್ಟ್ರಾಲ್ ಸಮಸ್ಯೆಯು ವಯಸ್ಸಾದವರಲ್ಲಿ ಅಥವಾ ಅನಾರೋಗ್ಯ ಇರುವವರಲ್ಲಿ ಮಾತ್ರ ಇರುತ್ತದೆ ಎಂದು ಭಾವಿಸಿದ್ದೆ. ಹಾಗಾಗಿ ನನಗೆ ಹೃದಯರೋಗ ಉಂಟಾಗುವ ಸಾಧ್ಯತೆ ಇದೆ ಎಂಬುದೇ ತಿಳಿದಿರಲಿಲ್ಲ” ಎನ್ನುತ್ತಾರೆ.

 ಬಗ್ಗೆ ಮಾಹಿತಿ ನೀಡುವ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಸೀನಿಯರ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾರಾಜಪಾಲ್ ಸಿಂಗ್ ಅವರು, “ಕೊಲೆಸ್ಟ್ರಾಲ್ ಕುರಿತು ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಹೆಚ್ಚು ಜಾಗೃತಿ ಉಂಟಾಗುತ್ತಿದೆ. ಆದರೆ ಅದನ್ನು ತಡೆಗಟ್ಟಲು ಅದಕ್ಕೆ ಪೂರಕವಾದ ವರ್ತನೆಯೂ ಇರಬೇಕಾಗುತ್ತದೆ. ಹೈ ಎಲ್‌ಡಿಎಲ್ ಅಪಾಯಕಾರಿ ಎಂದು ತಿಳಿದಿದ್ದರೂ ಬಹುತೇಕರು ಆ ಕುರಿತ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಅಥವಾ ಕುಟುಂಬದಲ್ಲಿ ಹೃದಯ ಸಮಸ್ಯೆಯ ಇತಿಹಾಸ ಇಲ್ಲದಿದ್ದರೆ ತಪಾಸಣೆ ಮಾಡಲು ಆದ್ಯತೆ ನೀಡುವುದಿಲ್ಲ. ಈಗ ಎಲ್‌ಡಿಎಲ್ ಕೊಲೆಸ್ಟ್ರಾಲ್ ಕುರಿತ ದೂರುಗಳನ್ನು ಹೊಂದಿರುವ ರೋಗಿಗಳಲ್ಲಿ ಸಾಮಾನ್ಯವಾಗಿ 30 ರಿಂದ 50 ವರ್ಷ ವಯಸ್ಸಿನವರು ಇರುತ್ತಾರೆ. ರೋಗಿಗಳಿಗೆ ಮೊದಲು ಅಪಾಯದ ಮೌಲ್ಯಮಾಪನ ಮಾಡಿ ಅನಂತರ ಚಿಕಿತ್ಸೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಔಷಧ ಪ್ರಾರಂಭಿಸುವ ಮೊದಲು ಜೀವನಶೈಲಿ ಮತ್ತು ಆಹಾರದ ಬದಲಾವಣೆ ಪ್ರಯೋಗ ಮಾಡುವುದು ಕಡ್ಡಾಯ. ಯುವ ಮತ್ತು ಲಕ್ಷಣರಹಿತ ರೋಗಿಗಳು ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಚಿಕಿತ್ಸೆಯನ್ನು ಬೇಗನೆ ಆರಂಭಿಸಬೇಕು ಮತ್ತು ವೈದ್ಯರ ಸೂಚನೆಗಳನ್ನು ಅನುಸರಿಸಬೇಕು. ಚಿಕಿತ್ಸೆ ಆರಂಭಿಸಿದ ಮೇಲೆ ಜೀವನಶೈಲಿ ಬದಲಾವಣೆಯನ್ನು ನಗಣ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಚಿಕಿತ್ಸೆಯ ಜೊತೆಗೆ ಜೀವನಶೈಲಿ ಬದಲಾವಣೆಗಳು ಜೊತೆಜೊತೆಯಾಗಿ ಸಾಗಬೇಕು” ಎಂದು ಹೇಳುತ್ತಾರೆ.

ಸಾಂಪ್ರದಾಯಿಕ ಚಿಕಿತ್ಸೆಗಳು ನಿರೀಕ್ಷಿಸಿದ ಫಲಿತಾಂಶಗಳನ್ನು ನೀಡದಿದ್ದಾಗ ಹೆಚ್ಚು ಸುಧಾರಿತ ಚಿಕಿತ್ಸೆಗಳನ್ನು ಪಡೆಯಬಹುದು. ಪಿಸಿಕೆ9 ಥೆರಪಿ, ಎಸ್ಐಆರ್‌ಎನ್‌ಎ ಥೆರಪಿ ಅಥವಾ ಇನ್ಕ್ಲಿಸಿರಾನ್‌ ನಂತಹ ಅತ್ಯಾಧುನಿಕ ಚಿಕಿತ್ಸೆಗಳು ರೋಗಿಗಳಿಗೆ ಎಲ್‌ಡಿಎಲ್ ಮಟ್ಟವನ್ನು ಸಾಮಾನ್ಯ ಹಂತಕ್ಕೆ ತರಲು ನೆರವಾಗಬಹುದು.

ಜೊತೆಗೆ ಗುಡ್ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಎಚ್‌ಡಿಎಲ್ ಕೊಲೆಸ್ಟ್ರಾಲ್‌ ನ ಸುಧಾರಣೆ ಕಡೆಗೂ ಏಕಕಾಲದಲ್ಲಿ ಗಮನ ಕೇಂದ್ರೀಕರಿಸಬಹುದು. ಯಾಕೆಂದರೆ ಇದು ರಕ್ತಪ್ರವಾಹದಿಂದ ಹೆಚ್ಚುವರಿ ಎಲ್‌ಡಿಎಲ್ ಕೊಲೆಸ್ಟ್ರಾಲ್‌ ಅನ್ನು ತೊಡೆದುಹಾಕುತ್ತದೆ. ಆದರೆ ಇದಕ್ಕೆ ಕೆಲವು ಜೀವನಶೈಲಿ ಬದಲಾವಣೆಗಳು ಅಗತ್ಯವಾಗಿದೆ. ಉದಾಹರಣೆಗೆ ದೈಹಿಕ ಚಟುವಟಿಕೆ ಮಾಡುವುದು ಮತ್ತು ಆಹಾರ ಸೇವನೆ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಹಾಗಂತ ಈ ಬದಲಾವಣೆ ಚಿಕಿತ್ಸೆಯ ಪರ್ಯಾಯ ಅಲ್ಲ ಎಂಬುದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು.

ಈ ಕುರಿತು ರಾಜೀವ್ ಮೆಹ್ತಾ ಅವರು, “ಮೊದಲಿಗೆ ನಾನು ಎಲ್ಲಾ ಸಹಜ ವಿಧಾನವನ್ನು ಪ್ರಯತ್ನಿಸಿದೆ. ನಾನು ಸರಿಯಾಗಿ ಆಹಾರ ಸೇವನೆ ಮಾಡಿದರೆ, ಹೆಚ್ಚು ವ್ಯಾಯಾಮ ಮಾಡಿದರೆ ಬಹುಶಃ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಭಾವಿಸಿದೆ” ಎನ್ನುತ್ತಾರೆ. ವಿಪರ್ಯಾಸವೆಂದರೆ ಅವರ ಪ್ರಯತ್ನಗಳು ಅವರ ಒಟ್ಟಾರೆ ಫಿಟ್‌ನೆಸ್‌ ನಲ್ಲಿ ಸುಧಾರಣೆ ಉಂಟು ಮಾಡಿತೇ ಹೊರತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಸ್ವಲ್ಪವೂ ಕಡಿಮೆಯಾಗಲಿಲ್ಲ.

ಎಲ್‌ಡಿಎಲ್ ಕೊಲೆಸ್ಟ್ರಾಲ್‌ ಅನ್ನು ಸಾಮಾನ್ಯ ಮಟ್ಟಕ್ಕೆ ಬರುವಂತೆ ಮಾಡಲು ಜೀವನಶೈಲಿ ಬದಲಾವಣೆಗಳ ಜೊತೆಗೆ ಚಿಕಿತ್ಸೆ ಪಡೆಯಬೇಕು. ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಮಾತ್ರ ಹೈ ಎಲ್‌ಡಿಎಲ್ ಕೊಲೆಸ್ಟ್ರಾಲ್‌ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಪ್ರತೀ 3–6 ತಿಂಗಳಿಗೊಮ್ಮೆ ನಿಯಮಿತ ತಪಾಸಣೆ ಮಾಡಬೇಕು. ಕೊಲೆಸ್ಟ್ರಾಲ್ ಮಟ್ಟ ನೋಡಿ ವೈದ್ಯರು ಆ ಕುರಿತು ಮಾಹಿತಿ ನೀಡಬಹುದು. ಚಿಕಿತ್ಸೆಗಳು ಹೈ ಕೊಲೆಸ್ಟ್ರಾಲ್‌ ಅನ್ನು ಗುಣಪಡಿಸುವುದಿಲ್ಲ, ಬದಲಿಗೆ ಅವುಗಳನ್ನು ನಿಯಂತ್ರಿಸಲು ನೆರವಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಆದ್ದರಿಂದ, ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಔಷಧಿಗಳನ್ನು ನಿಲ್ಲಿಸಿದರೆ ಮತ್ತೆ ನೀವು ಹಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಬಹುದು.[1]

ಈ ಕುರಿತು ರಾಜೀವ್ ಮೆಹ್ತಾ ಅವರು, “ಕೊನೆಗೆ, ನಾನು ಔಷಧಿಗಳು ಅಗತ್ಯ ಅನ್ನುವುದನ್ನು ಒಪ್ಪಿಕೊಂಡೆ. ಮೂರು ತಿಂಗಳಲ್ಲಿ ನನ್ನ ಎಲ್‌ಡಿಎಲ್ ಕೊಲೆಸ್ಟ್ರಾಲ್ ಗಣನೀಯವಾಗಿ ಕಡಿಮೆಯಾಯಿತು. ಆಗಲೇ ನಾನು ವೈದ್ಯಕೀಯ ಚಿಕಿತ್ಸೆಯ ಮೌಲ್ಯವನ್ನು ನಿಜವಾಗಿಯೂ ಅರಿತುಕೊಂಡೆ” ಎನ್ನುತ್ತಾರೆ.

LEAVE A REPLY

Please enter your comment!
Please enter your name here