ಉಡುಪಿ : ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಂತೃಪ್ತಿ ಮತ್ತು ಸಾರ್ಥಕತೆಯನ್ನು ಕಾಣಬಹುದು ಎಂಬುದಕ್ಕೆ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಗುರು ಹಾಗೂ ನಿರ್ದೇಶಕ ವಾಸುದೇವ ರಾವ್ ಅವರೇ ಸಾಕ್ಷಿ. ನಿವೃತ್ತ ಜೀವನದಲ್ಲೂ ಅಪಾರ ಉತ್ಸಾಹ ಮತ್ತು ಸ್ಪೂರ್ತಿಯಿಂದ ಯಕ್ಷಗಾನವನ್ನು ‘ತಮ್ಮ ಉಸಿರಾಗಿ ಮಾಡಿಕೊಂಡು ಅವರು ನಿರಂತರ ಕ್ರಿಯಾಶೀಲರಾಗಿದ್ದಾರೆ .
ಮಿತ್ರರಾದ ಕೆ.ಎಲ್. ಕುಂಡಂತಾಯರ ಅವರ ಪ್ರೇರಣೆಯಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ತಂಡವನ್ನು ರಚಿಸಿದ ವಾಸುದೇವ ರಾವ್ ಅವರು, 2014ರ ನವೆಂಬರ್‌ನಲ್ಲಿ ಎಲ್ಲೂರು ವಿಶ್ವೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ರುಕ್ಷಣಿ ಕಲ್ಯಾಣ ಪ್ರಸಂಗದ ಮೂಲಕ ಪ್ರಥಮ ಪ್ರದರ್ಶನ ನೀಡಿದ್ದರು . 1996ರಲ್ಲಿ ಆರಂಭವಾದ ಈ ತಂಡವು ಪ್ರಾರಂಭದಲ್ಲಿ ಆಕಾಶವಾಣಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿತ್ತು . ಆದರೆ 2015ರಿಂದ ಪೂರ್ಣ ಪ್ರಮಾಣದ ತಾಳಮದ್ದಳೆ ಕಾರ್ಯಕ್ರಮಗಳನ್ನು ಆರಂಭಿಸಿತು . ಕಳೆದ ಹತ್ತು ವರ್ಷಗಳಲ್ಲಿ ಒಟ್ಟು 520 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಗಮನಾರ್ಹ ಸಾಧನೆ ಮಾಡಿದೆ .
ದಶಮಾನೋತ್ಸವ ಸಂಭ್ರಮ ತಂಡದ ಅಂಗವಾಗಿ 2025 ರ ಡಿಸೆಂಬರ್ 22 ರಿಂದ 31 ರವರೆಗೆ ಇಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತು ದಿನಗಳ ವಿಶೇಷ ತಾಳಮದ್ದಳೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.
ಈ ಅವಧಿಯಲ್ಲಿ: 9 ವರ್ಷಗಳ ಕಾಲ 9 ಸಪ್ತಾಹಗಳ ಕಾಠ್ಯಕ್ರಮ , ಶ್ರೀ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ 2 ವರ್ಷ ಸಪ್ತಾಹ , 3 ವರ್ಷ 3 ದಿನಗಳ ನಿರಂತರ ಕಾಠ್ಯಕ್ರಮ ನಡೆಸಿರುವುದು ಮಹಿಳಾ ತಾಳಮದ್ದಳೆ ಕ್ಷೇತ್ರದಲ್ಲೇ ಅಪರೂಪದ ಸಾಧನೆಯಾಗಿದೆ.
ಬೇರೆ ಪ್ರತಿಷ್ಠಿತ ಮಹಿಳಾ ತಂಡಗಳ 2–3 ಕಲಾವಿದರೊಂದಿಗೆ ತಮ್ಮ ತಂಡದ ಸದಸ್ಯರನ್ನು ಸೇರಿಸಿ ಹೊಸ ಪ್ರಯೋಗಗಳನ್ನು ನಡೆಸಿರುವುದು ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿದೆ. ಪ್ರತೀ ವರ್ಷ ಹಿರಿಯ ಕಲಾವಿದರನ್ನು ಸನ್ಮಾನಿಸುವ ಸಂಪ್ರದಾಯವನ್ನು ತಂಡ ನಿರಂತರವಾಗಿ ಪಾಲಿಸಿಕೊಂಡು ಬಂದಿದೆ. ತಂಡದ ಆರಂಭಿಕ ಹಂತದಲ್ಲಿ ಪ್ರದಾನ ಭಾಗವತರಾಗಿದ್ದ ಹಾಗೂ ಮಾರ್ಗದರ್ಶಕರಾಗಿದ್ದ ಶ್ರೀ ಬಲಿಪ ಪ್ರಸಾದ ಬಲಿಪರವರ ಸೇವೆಯನ್ನು ತಂಡ ಸದಾ ಸ್ಮರಿಸುತ್ತಿದೆ .
ಈ ಹತ್ತು ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲದೆ ಕರ್ನಾಟಕದ ಅನೇಕ ದೂರದ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಲಾಗಿದೆ. ಕೊರೋನಾದ ಮೊದಲು ಸತತ ಮೂರು ವರ್ಷಗಳ ಕಾಲ ಬೆಂಗಳೂರು ಹಾಗೂ ಚೆನ್ನೈಗಳಲ್ಲಿ ಮೂರು ದಿನಗಳ ಕಾಠ್ಯಕ್ರಮಗಳನ್ನು ನೀಡುವ ಮೂಲಕ ತಂಡ ಜನಪ್ರಿಯತೆ ಗಳಿಸಿತು.
ಮಹಿಳಾ ತಾಳಮದ್ದಳೆ ಕ್ಷೇತ್ರದಲ್ಲಿ ಹೊಸ ದಾರಿ ತೆರೆದ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ, ತನ್ನ ಸಾಧನೆಯ ಮೂಲಕ ಸಾಂಸ್ಕೃತಿಕ ಇತಿಹಾಸವನ್ನೇ ನಿರ್ಮಿಸಿದೆ ಎಂಬ ಹೆಮ್ಮೆ ತಂಡದ ಸದಸ್ಯರಲ್ಲಿ ಮನೆಮಾಡಿದೆ.

