ಚಿಕ್ಕಮಗಳೂರು: ನವರಾತ್ರಿ ಭಾರತದಾದ್ಯಂತ ಹಿಂದೂಗಳು ಆಚರಿಸುವ ಬಹಳ ದೊಡ್ಡ ಹಬ್ಬ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಅದೇ ರೀತಿಯಾಗಿ ಕಾಫಿನಾಡು ಚಿಕ್ಕಮಗಳೂರಲ್ಲೂ ಕೂಡ ಮೈಸೂರು ದಸರಾದಷ್ಟೇ ಅದ್ಧೂರಿಯಾಗಿ ನವರಾತ್ರಿ ವೈಭವ ನಡೆಯುತ್ತೆ ಹಾಗಾದ್ರೆ ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ನವರಾತ್ರಿ ವೈಭೋಗ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಶ್ರೀ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ನವರಾತ್ರಿ ವೈಭೋಗ ನಡೆಯಲಿದೆ. ಜಗದ್ಗುರು ಶ್ರೀ ಆದಿಶಂಕರ ಭಗವತ್ಪಾದರಿಂದ ಸ್ಥಾಪಿಸಲ್ಪಟ್ಟ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಈ ವರ್ಷದ ಶ್ರೀ ಶರನ್ನವರಾತ್ರಿ ಮಹೋತ್ಸವವು ಸಕಲ ಸಂಪ್ರದಾಯಗಳೊಂದಿಗೆ ಮತ್ತು ವೈಭವದಿಂದ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ದೇಶದ ಮೂಲೆಮೂಲೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆಯಲು ಸಿದ್ಧರಾಗಿದ್ದಾರೆ.
ದಿನ ವಿಶೇಷ ಪೂಜೆ
ವೈಶಿಷ್ಟ್ಯ ಪೂರ್ಣ ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 21ರಂದು, ಭಾದ್ರಪದ ಕೃಷ್ಣ ಅಮಾವಾಸ್ಯೆಯಂದು, ಜಗನ್ಮಾತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ, ಶತರುದ್ರಾಭಿಷೇಕ ಮತ್ತು ಶ್ರೀಸೂಕ್ತ ಪಠಣದೊಂದಿಗೆ ವಿಶೇಷ ಅಭಿಷೇಕಗಳು ನಡೆಯಲಿವೆ. ಆ ದಿನ ತಾಯಿ ಶಾರದಾಂಬೆ ಜಗತ್ಪಸೂತಿಕಾ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.
ವಿವಿಧ ಅಲಂಕಾರ
ನವರಾತ್ರಿಯ ಪ್ರತಿ ದಿನವೂ ದೇವಿಯನ್ನು ವಿವಿಧ ಅಲಂಕಾರಗಳಲ್ಲಿ ಶೃಂಗಾರಗೊಳಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಾಲ್ಕು ವೇದಗಳ ಪಾರಾಯಣ ರಾಮಾಯಣ, ದೇವಿ ಭಾಗವತ ಮತ್ತು ದುರ್ಗಾಸಪ್ತಶತಿ ಪಾರಾಯಣ, ಭವನೇಶ್ವರಿ ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾವರಣ ಪೂಜೆ, ಕುಮಾರಿ ಮತ್ತು ಸುವಾಸಿನಿ ಪೂಜೆ ಈ ಎಲ್ಲಾ ಕಾರ್ಯಕ್ರಮಗಳು ಪೀಠದ ಪರಂಪರಾನುಗತ ಪದ್ಧತಿಯಂತೆ ನಡೆಯಲಿದ್ದು, ಭಕ್ತರು ಭಾಗವಹಿಸಿ ಪುಣ್ಯ ಗಳಿಸಬಹುದು.
ಧಾರ್ಮಿಕ ವಿಧಿಗಳ ಜೊತೆಗೆ, ಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯತಿಗಳಿಂದ ಆಗಮಿಸುವ ಭಜನಾ ತಂಡಗಳ ಕಾರ್ಯಕ್ರಮಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿವೆ. ಈ ಕಾರ್ಯಕ್ರಮಗಳು ನವರಾತ್ರಿಯ ಆಧ್ಯಾತ್ಮಿಕ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಲಿವೆ. ಈ ಬಾರಿಯ ನವರಾತ್ರಿ ಮಹೋತ್ಸವವು ಭಕ್ತ ಸಮುದಾಯಕ್ಕೆ ಒಂದು ಅವಿಸ್ಮರಣೀಯ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.